ಕನ್ನಡದ ಜನಪ್ರಿಯ ಕಿರುತೆರೆ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 10ಕ್ಕೆ ಈ ವಾರ ಸದಸ್ಯರ ಕಟುಂಬಸ್ಥರು ಆಗಮಿಸಿದ್ದರು. ಬಿಗ್ ಬಾಸ್ ವಾರವಿಡೀ ಭಾವುಕ ಕ್ಷಣಗಳಿಂದ ತುಂಬಿತ್ತು. ಇದೀಗ ಕನ್ನಡ ಚಿತ್ರರಂಗದ ಪ್ರಸಿದ್ಧಿ ಹೆಚ್ಚಿಸಿರುವ 'ಕಾಂತಾರ' ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ಆಗಮಿಸಿದ್ದಾರೆ. 'ಹೆಣ್ಣಿನ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ' ಎಂಬ ಶೀರ್ಷಿಕೆಯಡಿ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.
ಬಿಗ್ ಬಾಸ್ ಮನೆಯ ಮುಖ್ಯದ್ವಾರದ ಮೂಲಕ ಬಂದ 'ಕಾಂತಾರ' ಚೆಲುವೆ ಸಪ್ತಮಿ ಗೌಡ ಅವರನ್ನು ಸ್ಪರ್ಧಿಗಳು ಸ್ವಾಗತಿಸಿದ್ದಾರೆ. ಮೆಚ್ಚಿನ ನಟಿಯನ್ನು ಕಂಡ ಮನೆ ಮಂದಿ ಖುಷಿ ಆಗಿದ್ದಾರೆ. ಕೆಲ ಹೊತ್ತು ಸ್ಪರ್ಧಿಗಳೊಡನೆ ಉತ್ತಮ ಕ್ಷಣಗಳನ್ನು ಕಳೆದಿದ್ದಾರೆ. ಬಳಿಕ ತಾವು ಬಿಗ್ ಬಾಸ್ ಮನೆಗೆ ಬಂದಿರುವುದರ ಹಿಂದಿನ ಕಾರಣ ಬಹಿರಂಗಪಡಿಸಿದ್ದಾರೆ.
ನಾನು ಬಿಗ್ ಬಾಸ್ ಮನೆಗೆ ಬಂದಿರುವುದರ ಕಾರಣವೇನೆಂದರೆ, ನಮ್ಮ ಕರ್ನಾಟಕ ಸರ್ಕಾರದ ಕಡೆಯಿಂದ 'ಶುಚಿ: ನನ್ನ ಮೈತ್ರಿ ಮುಟ್ಟಿನ ಕಪ್' ಎಂಬ ಯೋಜನೆ ಆರಂಭಿಸಿದ್ದಾರೆ. ಶೇ. 80ರಷ್ಟು ಹೆಣ್ಮಕ್ಕಳು ಆ ಕಪ್ ಅನ್ನು ಬಳಸುತ್ತಿದ್ದಾರೆ. ಪ್ಯಾಡ್ಸ್ ಇಂದ ಋತುಸ್ರಾವದ ಕಪ್ ಕಡೆಗೆ ಮಹಿಳೆಯರಿಗೆ ಅರಿವು ಮೂಡಿಸಿ, ಅದರ ಬಳಕೆ ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನಾನದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಇಂದು ಈ ಮನೆಗೆ ಬಂದಿದ್ದೇನೆ. ಇಲ್ಲಿ ಕೂಡ ಹೆಣ್ಮಕ್ಕಳಿದ್ದೀರ ಎಂದು ಹೇಳಿ, ಮುಟ್ಟಾದ ಸಂದರ್ಭ ಬಳಸುವ ಕಪ್ ಅನ್ನು ಅವರಿಗೆ ನೀಡಿದರು. ಇದು ಸರ್ಕಾರದ ವತಿಯಿಂದ ಎಂದು ತಿಳಿಸಿದರು. ನಮ್ಮ ಕಡೆಯಿಂದ ಈ ಕಪ್ ಬಳಸಲು ಪ್ರಯತ್ನ ಮಾಡೋಣ ಎಂದು ತಿಳಿಸಿ, 'ಋತುಸ್ರಾವ ಕಪ್'ನ ಮಹತ್ವವನ್ನು ಬಿಗ್ ಬಾಸ್ ಮನೆಯಲ್ಲಿ ಸಾರಿದ್ದಾರೆ.