ಕನ್ನಡದ 'ಬಿಗ್ ಬಾಸ್' ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ. ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿವಿಧ ಸನ್ನಿವೇಶಗಳಲ್ಲಿ ಸ್ಪರ್ಧಿಗಳ ನಾನಾ ಭಾವನೆಗಳು ವ್ಯಕ್ತವಾಗುತ್ತವೆ. ಅಚ್ಚುಕಟ್ಟಾಗಿ ಆಟ ಆಡುವವರು, ಪ್ರೇಕ್ಷಕರ ಗಮನ ಸೆಳೆಯುವವರು ಕೊನೆ ಹಂತದವರೆಗೂ ತಲುಪುತ್ತಾರೆ. ಬಿಗ್ ಬಾಸ್ ಕೊಡುವ ಟಾಸ್ಕ್ ಸಹ ಸವಾಲಿನದ್ದೇ ಆಗಿರುತ್ತದೆ. ಈ ಸವಾಲುಗಳನ್ನು ಸ್ಪರ್ಧಿಗಳು ಹೇಗೆ ಸ್ವಿಕರಿಸುತ್ತಾರೆಂಬುದೇ 'ಅವರ ಪರೀಕ್ಷೆ'.
ವಾರ ಕಳೆದಂತೆ ಮನೆ ಮಂದಿಯ ಸ್ವಭಾವ, ವರ್ತನೆಗಳು ಬದಲಾಗುತ್ತಿವೆ. ಅದರಲ್ಲಿಯೂ ಡ್ರೋನ್ ಪ್ರತಾಪ್ ಮೊದಲಿದ್ದ ರೀತಿಗೂ ಈಗಿರುವ ರೀತಿಗೂ ಅಜಗಜಾಂತರವಿದೆ. ಪ್ರಾರಂಭದಲ್ಲಿ ಒಬ್ಬರೇ ಇರುತ್ತಿದ್ದಅವರು ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಅದರಲ್ಲಿಯೂ ಡ್ರೋನ್ ವಿಚಾರವಾಗಿ ಕೆಲವು ಮಾತುಗಳನ್ನು ಇತರ ಸ್ಪರ್ಧಿಗಳು ಆಡಿದ್ದರು. ಅದನ್ನು ಎದುರಿಸಿ ಪ್ರತಾಪ್ ತಮ್ಮನ್ನು ತಾವು ನಿರೂಪಿಸಿಕೊಂಡ ರೀತಿ ನಿಜಕ್ಕೂ ಪ್ರಶಂಸನೀಯ.
ಮೊದಲಿನಿಂದಲೂ ಪ್ರತಾಪ್, ತಮ್ಮ ಕುಟುಂಬದವರ ಬಗ್ಗೆ ಮಾತನಾಡಿದ್ದು ಕಡಿಮೆಯೇ. ಆದರೆ ಅವರು ಎಷ್ಟೋ ವರ್ಷಗಳಿಂದ ಕುಟುಂಬದಿಂದ ದೂರವಿದ್ದಾರೆ ಎಂಬುದನ್ನು ಹೇಳಿಕೊಂಡಿದ್ದರು. ಅಲ್ಲದೇ ತಂದೆ ತಾಯಿ ಮತ್ತು ತಂಗಿಯ ಜೊತೆಗೆ ಮಾತಾಡಬೇಕು ಅನಿಸುತ್ತಿದೆ ಎಂದೂ ಹೇಳಿದ್ದರು. ಕಳೆದ ವಾರ ಸ್ಪರ್ಧಿಗಳಿಗೆ ತಮ್ಮ ಕುಟುಂಬದವರು ಬರೆದ ಪತ್ರಗಳನ್ನು ಪಡೆದುಕೊಳ್ಳುವ ಅವಕಾಶ ಸಿಕ್ಕಿತ್ತು. ಆದರೆ, ಅದರಲ್ಲಿ ಪ್ರತಾಪ್ ವಿಫಲರಾದರು. ಹಾಗಾಗಿ ಅವರು ನಿರಾಶೆಗೊಂಡಿದ್ದರು.