ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಪ್ರೇಕ್ಷಕರನ್ನು ರಂಜಿಸುತ್ತಿದೆ. ದಿನಕ್ಕೊಂದು ಟ್ವಿಸ್ಟ್, ಹೊಸ ಕಥೆ, ಪ್ರೀತಿ, ಸ್ನೇಹ, ಮನಸ್ತಾಪ ಜೊತೆಗೆ ಸಿಕ್ಕಾಪಟ್ಟೆ ಮನರಂಜನೆ ಹೀಗೆ ನಾನಾ ವಿಷಯಗಳ ಸಲುವಾಗಿ ಸಖತ್ ಸದ್ದು ಮಾಡುತ್ತಿದೆ. ಸೀಸನ್ 10ರ ಐದನೇ ವಾರವೂ ಪೂರ್ಣಗೊಂಡಿದೆ. ಶನಿವಾರದ ವೀಕೆಂಡ್ ಎಪಿಸೋಡ್ನಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಶಾಕ್ ನೀಡಿದೆ. ಪ್ರತಿ ಬಾರಿ ಆದಿತ್ಯವಾರ ನಡೆಯುತ್ತಿದ್ದ ಎಲಿಮಿನೇಶನ್ ಇಂದೇ ನಡೆಯಲಿದೆ.
ಹೌದು, 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಎಲಿಮಿನೇಷನ್ ಕೂಡ ನಡೆಯುತ್ತದೆ. ಮನೆಯಿಂದ ಓರ್ವ ಸ್ಪರ್ಧಿ ಹೊರ ನಡೆಯುತ್ತಾರೆ. ಅದು ಯಾರು? ಎಂದು ತಿಳಿದುಕೊಳ್ಳಲು ಮನೆಯ ಸ್ಪರ್ಧಿಗಳ ಜೊತೆ ಪ್ರೇಕ್ಷಕರು ಕೂಡ ಕಾತರರಾಗಿರುತ್ತಾರೆ. ಎಲಿಮಿನೇಷನ್ಗೂ ಮುನ್ನ ಸೇಫ್ ಆದ ಸ್ಪರ್ಧಿಗಳ ಹೆಸರು ಬರುತ್ತದೆ. ಒಂದೆರಡು ಸ್ಪರ್ಧಿಗಳನ್ನು ಶನಿವಾರವೇ ಸೇಫ್ ಮಾಡಿ, ಮನೆಯಿಂದ ಹೊರ ಹೋಗುವ ಸ್ಪರ್ಧಿಯ ಹೆಸರನ್ನು ಕಿಚ್ಚ ಸುದೀಪ್ ಆದಿತ್ಯವಾರ ತಿಳಿಸುತ್ತಾರೆ.
ಆದರೆ, ಈ ಬಾರಿ ಎಲಿಮಿನೇಶನ್ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. ಶನಿವಾರವೇ ಮನೆಯಿಂದ ಹೊರ ಹೋಗುವ ಸ್ಪರ್ಧಿಯ ಹೆಸರನ್ನು ಸುದೀಪ್ ಹೇಳಲಿದ್ದಾರೆ. ಇಂದು ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ತೋರಿಸಲಾಗಿದೆ. 'ಶನಿವಾರವೇ ಎಲಿಮಿನೇಶನ್ ಹೊಗೆ!' ಎಂಬ ಕ್ಯಾಪ್ಶನ್ ಜೊತೆಗೆ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ:ಬಿಗ್ ಬಾಸ್: ಮನೆಯವರ ಪತ್ರ ಪಡೆಯಲು ಸ್ಪರ್ಧಿಗಳಿಗೆ ವಿಭಿನ್ನ ಟಾಸ್ಕ್!
ಸುದೀಪ್ ವೇದಿಕೆಗೆ ಎಂಟ್ರಿಯಾಗುತ್ತಿದ್ದಂತೆ, ವರ್ತೂರು ಸಂತೋಷ್ ಅವರ ಜೊತೆ ಮಾತನಾಡಿದ್ದಾರೆ. 'ಕಳೆದ ವಾರ ನಿಮ್ಮಲ್ಲಿ ಮನೆಯಿಂದ ಹೊರ ಹೋಗದಂತೆ ಸಾಕಷ್ಟು ರಿಕ್ವೆಸ್ಟ್ ಮಾಡಿಕೊಂಡೆ' ಎಂದು ಹೇಳುತ್ತಾರೆ. ಈ ವೇಳೆ ವರ್ತೂರು, 'ಈ ಕಾರಣಕ್ಕೆ ನಿಮಗೆ, ಕರ್ನಾಟಕದ ಜನತೆಗೆ ಮತ್ತು ಬಿಗ್ ಬಾಸ್ಗೆ ತುಂಬಾ ಥ್ಯಾಂಕ್ಸ್..' ಅಷ್ಟು ಹೇಳುವಷ್ಟರಲ್ಲೇ ಅವರ ಮಾತನ್ನು ಅರ್ಧಕ್ಕೆ ನಿಲ್ಲಿಸಿದ ಕಿಚ್ಚ, 'ಲಾಸ್ಟ್ನಲ್ಲಿ ಎಲಿಮಿನೇಶನ್ ಬರೋ ಬದಲು ಈ ಸೀಸನ್ 10ರಲ್ಲಿ ವಾರದ ಕಥೆಯ ಮೊದಲನೇ ಸಂಚಿಕೆಯಲ್ಲೇ ನಾನು ಎಲಿಮಿನೇಶನ್ ಮಾಡಿಬಿಟ್ಟು ಮಾತನಾಡುತ್ತೇನೆ. ಎಲಿಮಿನೇಶನ್ ಆಗುತ್ತಿರುವ ಕಂಟೆಸ್ಟೆಂಟ್ ಈಸ್...." ಇಲ್ಲಿಗೆ ಪ್ರೋಮೋ ಕೊನೆಗೊಳ್ಳುತ್ತದೆ.
ಈ ಬಾರಿ ನಾಮಿನೇಷನ್ನಲ್ಲಿ ವಿನಯ್ ಗೌಡ, ಕಾರ್ತಿಕ್, ಭಾಗ್ಯಶ್ರೀ, ನೀತು, ಇಶಾನಿ, ನಮ್ರತಾ, ತುಕಾಲಿ ಸಂತು ಅವರಿದ್ದಾರೆ. ಇವರಲ್ಲಿ ಒಬ್ಬ ಸ್ಪರ್ಧಿ ಶನಿವಾರವೇ ಮನೆಯಿಂದ ಹೊರನಡೆಯೋದಂತೂ ಪಕ್ಕಾ. ಅಲ್ಲದೇ, ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಕೊಂಚ ಗರಂ ಆದಂತೆ ಕಾಣಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ವಾರ ಮನೆಗೆ ಹೋಗೋರ್ಯಾರು? ಸೇಫ್ ಆಗೋರ್ಯಾರು? ಎಂಬುದನ್ನು ತಿಳಿದುಕೊಳ್ಳಲು ಜಿಯೋಸಿನಿಮಾದಲ್ಲಿ ನೇರ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡವನ್ನು ವೀಕ್ಷಿಸಬಹುದಾಗಿದೆ. ಬಿಗ್ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರ ಜಿಯೋ ಸಿನಿಮಾದಲ್ಲಿ ಲಭ್ಯವಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ:ಬಿಗ್ ಬಾಸ್ ಪ್ರೋಮೋ: ಕ್ಯಾಪ್ಟನ್ಸಿಗಾಗಿ ಮತ್ತೆ ಕಾದಾಟ ಶುರು