ಬಿಗ್ ಬಾಸ್ ಸೀಸನ್ 10ರ ನಾಲ್ಕನೇ ವಾರ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆ ಸಿಗುತ್ತಿದೆ. ನಿನ್ನೆ ಮೊನ್ನೆಯೆಲ್ಲಾ ಹಳ್ಳಿಮನೆಯಾಗಿ ಬದಲಾಗಿದ್ದ ದೊಡ್ಮನೆಯಲ್ಲೀಗ ಕೆಂಪು ಮಣ್ಣಿನ ಕುಸ್ತಿ ಅಖಾಡ ರಾರಾಜಿಸುತ್ತಿದೆ. ಕುಸ್ತಿ ಅಖಾಡದ ಒಳಗೆ ದೈಹಿಕ ಶಕ್ತಿ ಪ್ರದರ್ಶನ ನಡೆಯುತ್ತಿದ್ದರೆ, ಅಖಾಡದ ಹೊರಗೆ ಮಾತಿನ ಶಕ್ತಿ ಪ್ರದರ್ಶನವೂ ಜೋರಾಗಿಯೇ ನಡೆಯುತ್ತಿದೆ. ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಬಿಗ್ ಬಾಸ್ ಮನೆಯೊಳಗೆ ನಡೆಯುತ್ತಿರುವ ಕುಸ್ತಿ ಪಂದ್ಯದ ಝಲಕ್ ನೋಡಬಹುದು.
ಕಳೆದ ಎರಡು ದಿನದಿಂದ ಹಳ್ಳಿ ವಾತಾವರಣದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಎರಡು ಕುಟುಂಬಗಳಾಗಿ ಬದುಕುತ್ತಿದ್ದಾರೆ. ಅವರ ನಡುವೆ ಜೋರು ಸ್ಪರ್ಧೆಯೂ ನಡೆಯುತ್ತಿದ್ದು, ಮಾತುಗಳ ಜಟಾಪಟಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿದೆ. ಈಗ ಬಿಗ್ ಬಾಸ್ ಸ್ಪರ್ಧಿಗಳಿಗೆ ಕೈ ಕೈ ಮಿಲಾಯಿಸುವ ನೇರ ಅವಕಾಶವನ್ನು ನೀಡಿದ್ದಾರೆ. ಅದು ಕೆಮ್ಮಣ್ಣಿನ ಅಖಾಡದಲ್ಲಿ!
‘ಆನೆ’ಯಾಗಿ ಬಿಂಬಿಸಿಕೊಂಡಿದ್ದ ವಿನಯ್ ಮತ್ತು ಮೈಕಲ್ ಅಖಾಡದಲ್ಲಿ ಮುಖಾಮುಖಿಯಾಗಿದರೆ, ಸ್ನೇಹಿತ್ ಮತ್ತು ಕಾರ್ತಿಕ್ ಜಿದ್ದಾಜಿದ್ದಿಗೆ ಮುಂದಾಗಿದ್ದಾರೆ. ಅತ್ತ, ನೀತು ಮತ್ತು ಸಂಗೀತಾ ಕೂಡ ಪಂದ್ಯಕ್ಕೆ ಇಳಿದಿದ್ದಾರೆ. ವಿನಯ್ ಮತ್ತು ಮೈಕಲ್ ಇಬ್ಬರೂ ಒಮ್ಮೆಲೇ ಅಖಾಡದಿಂದ ಹೊರಬಿದ್ದ ದೃಶ್ಯ, ಸ್ನೇಹಿತ್ ಮತ್ತು ಕಾರ್ತಿಕ್ ಪರಸ್ಪರ ಕೈ ಮಿಲಾಯಿಸಿರುವ ದೃಶ್ಯ ಮತ್ತು ಸಂಗೀತಾ ಮತ್ತು ನೀತು ತಳ್ಳಾಡಿಕೊಳ್ಳುತ್ತಿರುವ ದೃಶ್ಯ ಪ್ರೋಮೊದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಬಿಗ್ ಬಾಸ್ ಕನ್ನಡ: ಟಿಶ್ಯೂ ಮೇಲೆ ಇಶಾನಿ ರ್ಯಾಪ್ ಲಿರಿಕ್ಸ್!