ಕನ್ನಡದ 'ಬಿಗ್ ಬಾಸ್' ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ಶೋ ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿವಿಧ ಸನ್ನಿವೇಶಗಳಲ್ಲಿ ಸ್ಪರ್ಧಿಗಳ ನಾನಾ ಭಾವನೆಗಳು ವ್ಯಕ್ತವಾಗುತ್ತಿವೆ. ಅಚ್ಚುಕಟ್ಟಾಗಿ ಆಟ ಆಡುವವರು, ಪ್ರೇಕ್ಷಕರ ಗಮನ ಸೆಳೆಯುವವರು ಕೊನೆ ಹಂತದವರೆಗೂ ತಲುಪುತ್ತಾರೆ. ಬಿಗ್ ಬಾಸ್ ಕೊಡುವ ಟಾಸ್ಕ್ ಸಹ ಸವಾಲಿನದ್ದೇ ಆಗಿರುತ್ತದೆ. ಈ ಸವಾಲುಗಳನ್ನು ಸ್ಪರ್ಧಿಗಳು ಹೇಗೆ ಸ್ವಿಕರಿಸುತ್ತಾರೆಂಬುದೇ ಅವರಿಗೆ 'ಪರೀಕ್ಷೆ'. ಇದನ್ನು ಗೆದ್ದು, ನಾಮಿನೇಟ್ ಆಗುವುದರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಾರೆ.
ಸೋತವರನ್ನು, ಕಳಪೆ ಪ್ರದರ್ಶನ ನೀಡಿದವರನ್ನು ಮನೆಯ ಸ್ಪರ್ಧಿಗಳೇ ನಾಮಿನೇಟ್ ಮಾಡುತ್ತಾರೆ. ಕೊನೆಗೆ 'ವಾರದ ಕತೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಮನೆಯಿಂದ ಹೊರಹೋಗುವ ಸ್ಫರ್ಧಿ ಯಾರೆಂದು ಸುದೀಪ್ ಘೋಷಿಸುತ್ತಾರೆ. ಅದನ್ನು ತಿಳಿದುಕೊಳ್ಳಲು ಮನೆಯ ಸ್ಪರ್ಧಿಗಳ ಜೊತೆ ಪ್ರೇಕ್ಷಕರು ಕೂಡ ಕಾತರರಾಗಿರುತ್ತಾರೆ. ಎಲಿಮಿನೇಷನ್ಗೂ ಮುನ್ನ ಸೇಫ್ ಆದ ಸ್ಪರ್ಧಿಗಳ ಹೆಸರು ಬರುತ್ತದೆ. ಒಂದೆರಡು ಸ್ಪರ್ಧಿಗಳನ್ನು ಶನಿವಾರವೇ ಸೇಫ್ ಮಾಡಿ, ಮನೆಯಿಂದ ಹೊರ ಹೋಗುವ ಸ್ಪರ್ಧಿಯ ಹೆಸರನ್ನು ಕಿಚ್ಚ ಸುದೀಪ್ ಆದಿತ್ಯವಾರ ತಿಳಿಸುತ್ತಾರೆ.
ಆದರೆ, ಈ ಬಾರಿ ಎಲಿಮಿನೇಷನ್ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. ಶನಿವಾರವೇ ಮನೆಯಿಂದ ಹೊರ ಹೋಗುವ ಸ್ಪರ್ಧಿಯ ಹೆಸರನ್ನು ಸುದೀಪ್ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇಶಾನಿ ಪ್ರಯಾಣ ಕೊನೆಗೊಂಡಿದೆ. ಕಳೆದ ವಾರ ವರ್ತೂರು ಸಂತೋಷ್ ಅವರ ಕಾರಣಕ್ಕಾಗಿ ಎಲಿಮಿನೇಷನ್ ನಡೆದಿರಲಿಲ್ಲ. ಹೀಗಾಗಿ ಈ ವಾರ ಡಬಲ್ ಎಲಿಮಿನೇಷನ್ ಇರಲಿದೆ. ಇಬ್ಬರು ಈ ಬಾರಿ ಮನೆಯಿಂದ ಹೊರ ಹೋಗುತ್ತಾರೆ. ಶನಿವಾರ ಇಶಾನಿ ಔಟ್ ಆಗಿದ್ದು, ಇಂದು ಮತ್ತೊಬ್ಬರು ಸ್ಪರ್ಧಿ ತಮ್ಮ ಮನೆಗೆ ಹೋಗಲಿದ್ದಾರೆ.