ಮುಂಬೈ(ಮಹಾರಾಷ್ಟ್ರ): 'ರಾಷ್ಟ್ರ ಭಾಷೆ' ವಿವಾದ ಇದೀಗ ಮತ್ತೆ ಭುಗಿಲೆದ್ದಿದೆ. ಹಿಂದಿ ನಮ್ಮ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ ಮೇಲೆ 'ಹಿಂದಿ ಇಂದು, ಎಂದೆಂದಿಗೂ ನಮ್ಮ ರಾಷ್ಟ್ರ ಭಾಷೆಯಾಗಿರುತ್ತದೆ' ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದರು. ಇದರಿಂದ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಅನೇಕರು ಅಜಯ್ ದೇವಗನ್ ಅವರನ್ನ ಟ್ರೋಲ್ ಮಾಡಿದ್ದರು. ಇದೀಗ ಇದೇ ವಿವಾದದ ಬಗ್ಗೆ ಕಂಗನಾ ರಣಾವತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಂಗನಾ ರಣಾವತ್ ಹೇಳಿದ್ದೇನು?:'ಹಿಂದಿಗಿಂತ ಸಂಸ್ಕೃತ ಹಳೆಯದಾಗಿದೆ. ಹಾಗಾಗಿ ಸಂಸ್ಕೃತ ರಾಷ್ಟ್ರ ಭಾಷೆಯಾಗಬೇಕು' ಎಂದು ಕಂಗನಾ ರಣಾವತ್ ಹೇಳಿದ್ದಾರೆ. ತಮ್ಮ ಮುಂಬರುವ ಚಿತ್ರ 'ಧಕ್ಕಡ್' ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಅವರು ಸಂವಾದ ನಡೆಸಿದರು. ಹಿಂದಿ ಭಾಷಾ ವಿವಾದದ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದಾಗ, 'ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುವ ಹಕ್ಕಿದೆ. ಆದರೆ, ನಮ್ಮ ದೇಶ ಸಾಂಸ್ಕೃತಿಕವಾಗಿ ಮತ್ತು ಭಾಷೆಯಲ್ಲಿ ಬಹಳ ವೈವಿಧ್ಯಮಯವಾಗಿದೆ. ಆದ್ದರಿಂದ ಅವುಗಳನ್ನು ತರಲು ನಮಗೆ ಒಂದು ಸಾಮಾನ್ಯ ಭಾಷೆ ಬೇಕು. ಭಾರತೀಯ ಸಂವಿಧಾನ ರಚನೆಯಾದಾಗ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಲಾಗಿತ್ತು. ಈಗ ನೋಡಿ ತಾಂತ್ರಿಕವಾಗಿ ಹೇಳುವುದಾದರೆ ಹಿಂದಿಗಿಂತ ತಮಿಳು ಹಳೆಯ ಭಾಷೆಯಾಗಿದೆ. ಆದರೆ ಅತ್ಯಂತ ಹಳೆಯದು ಸಂಸ್ಕೃತ ಭಾಷೆ. ಹಾಗಾಗಿ ನನ್ನ ಅಭಿಪ್ರಾಯದಲ್ಲಿ ಸಂಸ್ಕೃತವೇ ರಾಷ್ಟ್ರವಾಗಬೇಕು. ಹಿಂದಿಯಲ್ಲ ಎಂದಿದ್ದಾರೆ.
ಈಗ ನೀವು ತಮಿಳು ಭಾಷೆ ಹಿಂದಿ ಭಾಷೆಗಿಂತ ಹಳೆಯದ್ದು ಎಂದು ಹೇಳಬಹುದು. ಆದರೆ, ಸಂಸ್ಕೃತ ಭಾಷೆ ತಮಿಳಿಗಿಂತ ಹಳೆಯದ್ದು ಎಂಬುದನ್ನು ಗಮನಿಸಬೇಕು. ನನ್ನ ಅಭಿಪ್ರಾಯದಲ್ಲಿ ಸಂಸ್ಕೃತವೇ ನಮ್ಮ ರಾಷ್ಟ್ರ ಭಾಷೆಯಾಗಬೇಕು. ಏಕೆಂದರೆ ಕನ್ನಡ, ತಮಿಳು, ಗುಜರಾತಿ, ಹಿಂದಿ.. ಈ ಎಲ್ಲಾ ಭಾಷೆಗಳು ಸಂಸ್ಕೃತದಿಂದ ಹುಟ್ಟಿಕೊಂಡಿವೆ. ಹಿಂದಿ ಭಾಷೆಯ ಬದಲು ಸಂಸ್ಕೃತವನ್ನು ಏಕೆ ನಮ್ಮ ರಾಷ್ಟ್ರ ಭಾಷೆಯನ್ನಾಗಿ ಮಾಡಲಿಲ್ಲ ಎಂದು ನೀವು ನನ್ನನ್ನು ಕೇಳಿದರೆ ನನ್ನ ಬಳಿ ಉತ್ತರವಿಲ್ಲ. ಆ ನಿರ್ಧಾರಗಳೆಲ್ಲಾ ನಿರ್ದಿಷ್ಟ ಸಮಯದಲ್ಲಿ ತೆಗೆದುಕೊಳ್ಳಲಾಗಿವೆ.