ಖಳನಟ ಹಾಗೂ ಪೋಷಕ ಪಾತ್ರಗಳಲ್ಲಿ ಸ್ಯಾಂಡಲ್ವುಡ್ ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟ ಪ್ರಮೋದ್ ಶೆಟ್ಟಿ. ಇದೀಗ 'ಜಲಪಾತ' ಎಂಬ ಸಿನಿಮಾದಲ್ಲಿ ಪ್ರಮೋದ್ ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರ ಫಸ್ಟ್ ಲುಕ್ ರಿವೀಲ್ ಆಗಿದೆ.
ನಿರ್ದೇಶಕ ರಮೇಶ್ ಬೇಗಾರ್ ರಚಿಸಿ, ನಿರ್ದೇಶಿಸಿರುವ ಜಲಪಾತ ಚಿತ್ರದಲ್ಲಿ ಪ್ರತಿಭಾವಂತ ನಟ ಪ್ರಮೋದ್ ಶೆಟ್ಟಿ ಒಂದು ಪರಿಪೂರ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಲುಕ್ನ ಪೋಸ್ಟರ್ ಅನ್ನು ಅವರ ಪತ್ನಿ ನಟಿ, ನಿರ್ಮಾಪಕಿ ಸುಪ್ರೀತಾ ಶೆಟ್ಟಿ ನಿನ್ನೆ (ಭಾನುವಾರ) ಬಿಡುಗಡೆ ಮಾಡಿದರು.
ಜಲಪಾತ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಲುಕ್ ರಿವೀಲ್ ಬಳಿಕ ಮಾತನಾಡಿದ ಸುಪ್ರೀತಾ ಶೆಟ್ಟಿ 'ಪ್ರಮೋದ್ ಮೊದಲಿನಿಂದಲೂ ವಿಭಿನ್ನ ಪಾತ್ರಗಳು ಮತ್ತು ಹೊಸಬರಿಗೆ ಪ್ರೋತ್ಸಾಹಿಸುವುದನ್ನು ಬಯಸುವವರು. ಅದರಂತೆ ರಮೇಶ್ ಬೇಗಾರ್ ಜತೆಗೆ ಪ್ರೀತಿಯಿಂದ 2ನೇ ಪ್ರಾಜೆಕ್ಟ್ ಮಾಡಿದ್ದಾರೆ. ರವೀಂದ್ರ ನಿರ್ಮಾಣದ ಜಲಪಾತ ಚಿತ್ರದ ಈ ಪೋಸ್ಟರ್ ಏನೋ ವಿಭಿನ್ನತೆ ಇದೆ ಎಂಬುದನ್ನು ಸೊಗಸಾಗಿ ತೋರಿಸಿದೆ. ಪ್ರಮೋದ್ ಅವರ ಲುಕ್ ಆ ಭರ್ಜರಿಯಾಗಿದ್ದು, ಆ ಪಾತ್ರ ಮತ್ತು ಸಿನಿಮಾ ನೋಡಲು ಕಾತುರಳಾಗಿದ್ದೇನೆ' ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ರಮೇಶ್ ಬೇಗಾರ್ 'ಪರಿಸರ ಕಾಳಜಿ ಪ್ರಮೋದ್ ಶೆಟ್ಟಿ ಅವರ ವೈಯಕ್ತಿಕ ಆಸಕ್ತಿಯ ವಿಷಯ ಎಂದು ಅವರ ಚಟುವಟಿಕೆಯಿಂದ ಗಮನಿಸಿ ಈ ಪಾತ್ರಕ್ಕೆ ವಿನಂತಿಸಿದೆ. ಸಿನಿಮಾದ ಉದ್ದೇಶ ಅವರನ್ನು ಇಂಪ್ರೆಸ್ಸ್ ಮಾಡಿತು. ಹಾಗಾಗಿ ಈ ಪಾತ್ರ ಒಪ್ಪಿ ಅತ್ಯುತ್ತಮ ನಿರ್ವಹಣೆ ಮಾಡಿದ್ದಾರೆ' ಎಂದರು.
ನಿರ್ಮಾಪಕ ರವೀಂದ್ರ ತುಂಬರಮನೆ ಮಾತಾಡಿ, 'ಪರಿಸರ ರಕ್ಷಣೆ ಮತ್ತು ಅರಿವನ್ನು ನವಿರಾಗಿ ಹೇಳಲು ಹೊರಟ ನಮ್ಮ ತಂಡಕ್ಕೆ ಪ್ರಮೋದ್ ಶೆಟ್ಟಿ ಒತ್ತಾಸೆಯಾಗಿ ನಿಂತಿದ್ದಾರೆ. ಮಾತ್ರವಲ್ಲ ಚಿತ್ರದ ಮೌಲ್ಯ ಮತ್ತು ಅದ್ಧೂರಿತನವನ್ನು ಎತ್ತಿದ್ದಾರೆ. ಸಿನಿಮಾ ಜನರನ್ನು ಆಕರ್ಷಿಸುವಲ್ಲಿ ಪ್ರಮೋದ್ ಶೆಟ್ಟಿ ಅವರ ಈ ಪೋಸ್ಟರ್ ನಿರ್ಣಾಯಕವಾಗಿದೆ ಎಂದು ತಿಳಿಸಿದರು.
ಚಿತ್ರದ ನಾಯಕ ನಟ ರಜನೀಶ್.ಎಂ ಈ ಸಂದರ್ಭ ಉಪಸ್ಥಿತರಿದ್ದರು. ಸಾದ್ವಿನಿ ಕೊಪ್ಪ ಸಂಗೀತ ನಿರ್ದೇಶನ, ಶಶೀರ ಕ್ಯಾಮರಾ ವರ್ಕ್ ಹಾಗೂ ಅವಿನಾಶ್ ಸಂಕಲನ ಈ ಚಿತ್ರಕ್ಕಿದೆ. ಇಂಡಸ್ ಹರ್ಬ್ಸ್ ನ ಟಿ.ಸಿ ರವೀಂದ್ರ ತುಂಬರಮನೆ ನಿರ್ಮಾಣ ಮಾಡಿರುವ ಜಲಪಾತ ಚಿತ್ರ ಸೆಪ್ಟೆಂಬರ್ ತಿಂಗಳಿನಲ್ಲಿ ತೆರೆಗೆ ಬರಲಿದೆ.
ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾದ ನಾಗಶ್ರೀ ಬೇಗಾರ್:ಮಲೆನಾಡ ಪರಿಸರದ ಕಥೆ ಹೊಂದಿರುವ "ಜಲಪಾತ" ಸಿನಿಮಾದ ಲೀಡ್ ರೋಲ್ನಲ್ಲಿ ನಾಗಶ್ರೀ ಬೇಗಾರ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪೂರ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲ್ಯದಿಂದಲೂ ಮಲೆನಾಡು ಭಾಗದಲ್ಲಿ ಯಕ್ಷಗಾನ, ನಾಟಕ, ನೃತ್ಯ ಸೇರಿದಂತೆ ಕಿರುತೆರೆಯಲ್ಲಿಯೂ ಹೆಸರು ಮಾಡಿದ್ದಾರೆ. ಅಲ್ಲದೇ ಹುಚ್ಚಿಕ್ಕಿ ಎಂಬ ಕಿರುಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ವೈಶಂಪಾಯನ ತೀರ ಸಿನಿಮಾದಲ್ಲಿ ಅತ್ಯಂತ ವಿಭಿನ್ನ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದರು. ಹಲವು ಪ್ರತಿಷ್ಠಿತ ನಾಟಕೋತ್ಸವ, ಯುವ ಜನೋತ್ಸವದಲ್ಲಿ ಶ್ರೇಷ್ಠ ನಟಿ ಪ್ರಶಸ್ತಿಗಳನ್ನು ಬಾಚಿಕೊಂಡ ರಂಗಭೂಮಿ ಪ್ರತಿಭೆ ನಾಗಶ್ರೀ. ಜಲಪಾತ ಚಿತ್ರದಲ್ಲಿ 3 ಶೇಡ್ ಇರುವ ಸಂಕೀರ್ಣ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಮಲೆನಾಡ ಪ್ರಾದೇಶಿಕ ಭಾಷೆಯನ್ನು ನಾಗಶ್ರೀ ಸಮರ್ಪಕವಾಗಿ ಬಳಸಿಕೊಂಡಿದ್ದು, ಈ ಪ್ರತಿಭೆಗೆ ಉಜ್ವಲ ಅವಕಾಶಗಳು ಸಿಗಲಿ ಎಂಬುದು ಎಲ್ಲರ ಆಶಯ.
ಇದನ್ನೂ ಓದಿ:ಜಲಪಾತ: ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾದ ನಾಗಶ್ರೀ ಬೇಗಾರ್