ಕರ್ನಾಟಕ

karnataka

ETV Bharat / entertainment

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ವಿಶ್ವ ಕನ್ನಡ ಹಬ್ಬ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮನ್ನು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಾಗೂ ಕನ್ನಡಿಗರು ದುಬೈ ಇವರ ಸಹಯೋಗದಲ್ಲಿ ನವೆಂಬರ್ 19ರಂದು ದುಬೈನ ಶೇಕ್ ರಶೀದ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಿದೆ.

kannada habba in dubai
ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮ

By

Published : Nov 3, 2022, 5:10 PM IST

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಾಗೂ ಕನ್ನಡಿಗರು ದುಬೈ ಇವರ ಸಹಯೋಗದಲ್ಲಿ ಮೊದಲ ಬಾರಿಗೆ ದುಬೈನಲ್ಲಿ ‘ವಿಶ್ವ ಕನ್ನಡ ಹಬ್ಬ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನವೆಂಬರ್ 19ರಂದು ದುಬೈನ ಶೇಕ್ ರಶೀದ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಈಗಾಗಲೇ ಈ ಬಾರಿಯ ವಿಶ್ವ ಕನ್ನಡ ಹಬ್ಬದ ಲೋಗೋ ಬಿಡುಗಡೆಯಾಗಿದ್ದು, ಕಾರ್ಯಕ್ರಮದ ಸಿದ್ದತೆಯೂ ಭರದಿಂದ ನಡೆಯುತ್ತಿದೆ.

ಕಾರ್ಯಕ್ರಮದಲ್ಲಿ ಗಣ್ಯರು ಭಾಗಿ:ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಟಿ. ಶಿವಕುಮಾರ ನಾಗರ ನವಿಲೆ ಇಂದು ಪತ್ರಿಕಾಗೋಷ್ಠಿ ನಡೆಸಿದರು. ಈ ಸುದ್ದಿಗೋಷ್ಠಿಯಲ್ಲಿ ನಟಿ ಪ್ರೇಮ, ನಟ ವಸಿಷ್ಠ ಸಿಂಹ ಹಾಗೂ ಇತರರು ಪಾಲ್ಗೊಂಡಿದ್ದರು. ನವೆಂಬರ್ 19ರಂದು ದುಬೈನಲ್ಲಿ ನಡೆಯುವ ‘ವಿಶ್ವ ಕನ್ನಡ ಹಬ್ಬ’ ವಿಶೇಷ ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜರಾದ ಯಧುವೀರ ಚಾಮರಾಜ ಒಡೆಯರ್, ನಟ ಶಿವರಾಜ್ ಕುಮಾರ್, ಮಹರ್ಷಿ ಡಾ.ಆನಂದ್ ಗುರೂಜಿ, ನಟಿಯರಾದ ಭವ್ಯ, ಸುಧಾರಾಣಿ, ಶೃತಿ, ಪ್ರೇಮಾ, ಮೇಘ ಶೆಟ್ಟಿ ವಿಜಯ ರಾಘವೇಂದ್ರ ಹಾಗೂ ಮುಖ್ಯ ಅತಿಥಿಯಾಗಿ ನಟ ವಸಿಷ್ಠ ಸಿಂಹ ಪಾಲ್ಗೊಳ್ಳುಲ್ಲಿದ್ದಾರೆ.

ನಾವೆಲ್ಲರೂ ಕಡ್ಡಾಯವಾಗಿ ಕನ್ನಡ ಬಳಸಲೇಬೇಕು:ನಟ ವಸಿಷ್ಠ ಸಿಂಹ ಮಾತನಾಡಿ ನಾವೆಲ್ಲರೂ ಕನ್ನಡ ಬೆಳೆಯಬೇಕು, ಕನ್ನಡ ಬಳಸಬೇಕು ಎಂದು ಹೇಳುತ್ತೇವೆ. ಕನ್ನಡಕ್ಕಾಗಿ ಹಲವಾರು ಜೀವಗಳು ನಿರಂತರವಾಗಿ ದುಡಿಯುತ್ತಿವೆ‌ ಹಾಗೂ ದುಡಿದಿದ್ದಾರೆ. ಅವರನ್ನೆಲ್ಲ ಗುರುತಿಸಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗೌರವ ನೀಡುತ್ತಿದೆ. ಈ ಕನ್ನಡ ಹಬ್ಬಕ್ಕೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಂತಾರಾಷ್ಟ್ರೀಯ ರಾಯಭಾರಿಯಾಗಿ ನನ್ನನ್ನು ಭಾಗವಹಿಸಬೇಕು ಎಂದು ಕೇಳಿದಾಗ ತುಂಬಾ ಹಿರಿಮೆ ಅನಿಸಿತು.

ಈ ರೀತಿಯ ಕಾರ್ಯಕ್ರಮದಿಂದ ವಿಚಾರಗಳ ವಿನಿಮಯ ಆಗುತ್ತೆ. ಈ ಕಾರ್ಯಕ್ರಮ ಬಹಳ ವಿಶೇಷವಾಗಿರುತ್ತೆ ಎಂದು ನಂಬಿದ್ದೇನೆ. ಎಲ್ಲರೂ ನವೆಂಬರ್ ಒನ್ ಕನ್ನಡಿಗರಾಗದೇ ನಂಬರ್ ಒನ್ ಕನ್ನಡಿಗರಾಗೋಣ ಎಂದು ಟಿ. ಶಿವಕುಮಾರ ಹೇಳಿದರು.

ಬಳಿಕ‌ ನಟಿ‌ ಪ್ರೇಮ ಮಾತನಾಡಿ, ದುಬೈನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರೋದು ತುಂಬಾ ಖುಷಿಯ ವಿಚಾರ. ಹಲವು ಕಲಾವಿದರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಕ್ಕಾಗಿ ಶಿವಕುಮಾರ್ ಅವರಿಗೆ ಧನ್ಯವಾದ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಇರುವ ಬೇರೆ ಬೇರೆ ಕಲೆಯ ಆಯ್ದ ಕಲಾವಿದರನ್ನು ದುಬೈಗೆ ಕರೆದುಕೊಂಡು ಹೋಗಿ ನಮ್ಮ ಕಲೆಯನ್ನು ಅಲ್ಲಿ ಪರಿಚಯಿಸುವ ಹಾಗೂ ಅವರನ್ನು ಗೌರವಿಸುವ ಉದ್ದೇಶವನ್ನು ಇದು ಒಳಗೊಂಡಿದೆ.

ಕನ್ನಡವನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮ ಮೂಲ ಕನ್ನಡಿಗರು ಹಾಗೂ ಅನಿವಾಸಿ ಕನ್ನಡಿಗರ ಬೆಸುಗೆಯಾಗಿದೆ. ಹಿರಿಯ ಪತ್ರಕರ್ತರಿಗೆ ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಡಾ. ಟಿ. ಶಿವಕುಮಾರ ನಾಗರ ನವಿಲೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ:ಕಾಂತಾರ ಸಿನಿಮಾ ನೋಡಿ‌ ಮೆಚ್ಚಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ABOUT THE AUTHOR

...view details