ಕನ್ನಡ ಚಿತ್ರರಂಗದ ಕನುಸುಗಾರ, ಶೋ ಮ್ಯಾನ್, ಕ್ರೇಜಿಸ್ಟಾರ್, ರಣಧೀರ, ರವಿಮಾಮ.. ಹೀಗೆ ಹಲವು ಬಿರುದುಗಳನ್ನು ಹೊಂದಿರುವ ಕನ್ನಡ ನಟ ವಿ.ರವಿಚಂದ್ರನ್. ಕನ್ನಡ ಸಿನಿಮಾರಂಗವನ್ನು ಶ್ರೀಮಂತಗೊಳಿಸಿದ ಕ್ರೇಜಿಸ್ಟಾರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 61ನೇ ವಸಂತಕ್ಕೆ ಕಾಲಿಟ್ಟಿರುವ ರವಿಚಂದ್ರನ್, ಕಳೆದ ಮೂರ್ನಾಲ್ಕು ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಆದರೆ ಈ ಬಾರಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರ ಜತೆ ಆಚರಿಸಿಕೊಂಡಿದ್ದಾರೆ.
ಕನಸುಗಾರನ ಬದುಕಿನ ಪಯಣ:ಕನ್ನಡ ಸಿನಿಮಾರಂಗದಲ್ಲಿ ನಾಲ್ಕು ದಶಕಗಳನ್ನು ಪೂರೈಸಿರುವ ರವಿಚಂದ್ರನ್ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದ ಶ್ರೀಮಂತ ನಿರ್ಮಾಪಕ ವೀರಾಸ್ವಾಮಿ ಅವರ ಪುತ್ರ. 1971ರಲ್ಲಿ ಕುಲ ಗೌರವ ಚಿತ್ರದಲ್ಲಿ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಾರೆ.
ಪ್ರೇಮಲೋಕ, ರಣಧೀರ, ಅಂಜದ ಗಂಡು, ರಾಮಾಚಾರಿ, ಅಣ್ಣಯ್ಯ ಹೀಗೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ಮಾಡಿರುವ ರವಿಚಂದ್ರನ್ಗೆ ಈಶ್ವರ ಎಂಬ ಮತ್ತೊಂದು ಹೆಸರಿದೆ. ಇದು ಅವರ ತಂದೆ ಹಾಗೂ ತಾಯಿ ಜಾತಕದ ಪ್ರಕಾರ ಇಟ್ಟ ಹೆಸರಂತೆ. ಮನೆಯಲ್ಲಿ ಇವರ ತಂದೆ - ತಾಯಿ ಈಶ್ವರ ಎಂದೇ ಕರೆಯುತ್ತಿದ್ದರಂತೆ.
ಈಶ್ವರನ ಪರಮ ಭಕ್ತ:ಸಹಜವಾಗಿ ಸಿನಿಮಾ ಸೆಲೆಬ್ರಿಟಿಗಳು ದೇವರ ಪೂಜೆ ಮಾಡುವುದು ಕಡಿಮೆ. ಆದರೆ, ಕ್ರೇಜಿಸ್ಟಾರ್ನ ಅಚ್ಚುಮೆಚ್ಚಿನ ದೇವರು ಈಶ್ವರ ಅನ್ನೋದು ಈ ಮಾತಿಗೆ ಪೂರಕ. ಏಕಾಂಗಿ ಸಿನಿಮಾ ಮಾಡಿ ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸುತ್ತಾರೆ. ಆ ಸಮಯಲ್ಲಿ ಸಿನಿಮಾ ಶೂಟಿಂಗ್ ಹೋದಾಗ, ಈಶ್ವರ ಪ್ರತಿಮೆಯನ್ನು ಮನೆಗೆ ತೆಗೆದುಕೊಂಡ ಬರುತ್ತಾರೆ. ಆಗ 'ಮಲ್ಲ' ಚಿತ್ರ ಸೂಪರ್ ಹಿಟ್ ಆಗುತ್ತದೆಯಂತೆ. ಅಂದಿನಿಂದ ಕ್ರೇಜಿಸ್ಟಾರ್ ಈಶ್ವರನ ಪರಮ ಭಕ್ತನಾಗಿದ್ದಾರೆ.
ರವಿಚಂದ್ರನ್ ಸಾಕಷ್ಟು ಸೋಲು- ಗೆಲುವುಗಳನ್ನು ನೋಡಿದ್ದಾರೆ. ಆದರೆ ಅವರ ಸಕ್ಸಸ್ ಸಿಕ್ರೇಟ್ ಎಂದರೆ, ಅವರು ಸಿನಿಮಾ ಶೂಟಿಂಗ್ ಅಥವಾ ಯಾವುದೇ ಕೆಲಸಕ್ಕೆ ಹೋಗಬೇಕಾದರೆ ಇವರ ತಾಯಿ ಪಟ್ಟಮ್ಮಲ್ ಕೈಯಲ್ಲಿ ನೀರು ಕುಡಿದು ಹೋಗುವುದು. ಆಗ ಆ ಕೆಲಸ ಸಕ್ಸಸ್ ಆಗುತ್ತಿದ್ದವು ಎಂಬುವುದು ಕನಸುಗಾರನ ನಂಬಿಕೆ. ಆದರೆ ಈ ವರ್ಷ ಅವರು ತಮ್ಮ ತಾಯಿಯನ್ನು ಕಳೆದುಕೊಂಡರು.
ರವಿಚಂದ್ರನ್ ಕನ್ನಡ ಚಿತ್ರರಂಗದ ಸಾಕಷ್ಟು ನಟರಿಗೆ ಲಕ್ಕಿ ಹ್ಯಾಂಡ್ ಅಂತೆ. ಹೊಸಬರು ಅಥವಾ ಸ್ಟಾರ್ ನಟರ ಸಿನಿಮಾಗಳ ಮುಹೂರ್ತದಲ್ಲಿ ರವಿಚಂದ್ರನ್ ಕ್ಲಾಪ್ ಮಾಡಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆಯಂತೆ. ಇದಕ್ಕೆ ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳು ಸಾಕ್ಷಿ. ಪವರ್ ಸ್ಟಾರ್ ಯಾವುದೇ ಹೊಸ ಸಿನಿಮಾ ಮುಹೂರ್ತ ಆದಾಗ ರವಿಚಂದ್ರನ್ ಅವರೇ ಬಂದು ಕ್ಲಾಪ್ ಮಾಡುವುದು ಒಂದು ವಾಡಿಕೆ.
ಪರಭಾಷಾ ನಟಿಯರನ್ನು ಕನ್ನಡಕ್ಕೆ ಕರೆತಂದರು:ಅಂದಿನ ಕಾಲದಲ್ಲಿ ಬಹುಬೇಡಿಕೆ ಹಾಗೂ ಸುಂದರ ನಟಿಮಣಿಗಳಾದ ಜೂಹಿ ಚಾವ್ಲಾ, ಖುಷ್ಬು, ಮೂನ್ ಮೂನ್ ಸೇನ್, ಮಧುಬಾಲ, ಮೀನಾ, ರೋಜಾ, ಭಾನುಪ್ರಿಯ, ಶಿಲ್ಪಾಶೆಟ್ಟಿ ಹೀಗೆ ಮುಂತಾದ ಹೆಸರಾಂತ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ಕರೆತಂದ ಹೆಗ್ಗಳಿಕೆ ರವಿಚಂದ್ರನ್ಗೆ ಸಲ್ಲುತ್ತದೆ.
ಪ್ರೇಮಲೋಕ ಸಿನಿಮಾ ಬಂದು 34 ವರ್ಷಗಳಾಗುತ್ತಿವೆ. ಆದರೆ ಇಂದಿಗೂ ರವಿಚಂದ್ರನ್ ಅವರನ್ನೇ ಪ್ರೇಮಲೋಕದ ಹೀರೋ ಎಂದೇ ಗುರುತಿಸುತ್ತಾರೆ. ಆ ಕಾಲದಲ್ಲಿ ರವಿಚಂದ್ರನ್ 60 ಲಕ್ಷ ರೂ. ಖರ್ಚು ಮಾಡಿ ಈ ಸಿನಿಮಾ ಮಾಡುತ್ತಾರೆ. ಆಗ ಇವರ ತಂದೆ ವೀರಸ್ವಾಮಿ, ಇಷ್ಟು ಲಕ್ಷ ಖರ್ಚು ಮಾಡಿ ಸಿನಿಮಾ ಮಾಡಬೇಡ ಎಂದು ಹೇಳಿದ್ದರಂತೆ. ಆದರೂ ಪ್ರೇಮಲೋಕ ಸಿನಿಮಾ ಮಾಡಿ ಯಶಸ್ವಿಯಾಗುತ್ತಾರೆ. ಈ ಸಿನಿಮಾ ಆ ಕಾಲದಲ್ಲಿ ಕೋಟಿ ಕೋಟಿ ಹಣವನ್ನ ಗಳಿಸುತ್ತದೆ.
15ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ: ಕಡಿಮೆ ಸಮಯದಲ್ಲಿ ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ತನ್ನ ಪ್ರತಿಭೆಯನ್ನು ನಿರೂಪಿಸಿದ ಕ್ರೇಜಿಸ್ಟಾರ್, 1999ರಲ್ಲಿ ಬಂದ 'ನಾನು ನನ್ನ ಹೆಂಡ್ತಿರು' ಸಿನಿಮಾ ಮೂಲಕ ಸಂಗೀತ ನಿರ್ದೇಶಕನ ಪಟ್ಟ ಅಲಂಕರಿಸುತ್ತಾರೆ. ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ಹಠವಾದಿ, ಅಪೂರ್ವ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಿಗೆ ಇವರ ಸಂಗೀತದ ಗಾನಸುಧೆ ಇದೆ. ಭಾರತೀಯ ಚಿತ್ರರಂಗದಲ್ಲಿ ಒಬ್ಬ ಸ್ಟಾರ್ ನಟ ಹಾಗೂ ಒಬ್ಬ ಸ್ಟಾರ್ ಸಂಗೀತ ನಿರ್ದೇಶಕ ಒಟ್ಟಿಗೆ ಕೆಲಸ ಮಾಡಿ, ಬರೋಬ್ಬರಿ 25ಕ್ಕೂ ಹೆಚ್ಚು ಸಿಮಾಗಳ ಸೂಪರ್ ಹಿಟ್ ಹಾಡುಗಳನ್ನ ಹಿಟ್ ಕಾಂಬಿನೇಷನ್ ಅಂದರೆ, ಅದು ರವಿಚಂದ್ರನ್ ಹಾಗೂ ಸಂಗೀತ ನಿರ್ದೇಶಕ ಹಂಸಲೇಖಾ.
ರವಿಚಂದ್ರನ್ ಸಿನಿಮಾದಿಂದ ದುಡಿದ ಹಣದಿಂದ ಯಾವುದೇ ಜಮೀನು, ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟುವ ಕೆಲಸ ಮಾಡಲಿಲ್ಲ. ಆ ಹಣವನ್ನ ಪೂರ್ತಿ ಸಿನಿಮಾಕ್ಕೆ ಹಾಕುತ್ತಿದ್ದರಂತೆ. ಸಿನಿಮಾ ಮೇಲೆ ಅಪಾರ ಪ್ರೀತಿ ಹಾಗೂ ವ್ಯಾಮೋಹ ರವಿಚಂದ್ರನ್, ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಅಂತಾ ಹೇಳುತ್ತಿದ್ದರಂತೆ. 61ನೇ ವಯಸ್ಸಿನಲ್ಲೂ ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿರೋ ಕ್ರೇಜಿಸ್ಟಾರ್, ರವಿ ಬೋಪಣ್ಣ, ತ್ರಿಶೂಲಂ ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜತೆಗೆ ರಿಯಾಲಿಟಿ ಶೋನಲ್ಲಿಯೂ ಮಿಂಚುತ್ತಿದ್ದಾರೆ.
ಇದನ್ನೂ ಓದಿ:'ತ್ರಿವಿಕ್ರಮ' ಚಿತ್ರತಂಡದಿಂದ ಕ್ರೇಜಿಸ್ಟಾರ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್