ನವದೆಹಲಿ :ಕ್ಯಾಲಿಫೋರ್ನಿಯಾದಲ್ಲಿ ನಡೆದ ಕೋಚೆನ್ ವ್ಯಾಲಿ ಮ್ಯೂಸಿಕ್ ಆ್ಯಂಡ್ ಆರ್ಟ್ಸ್ ಫೆಸ್ಟಿವಲ್ನಲ್ಲಿ ಹಾಡು ಹಾಡಿದ ಪ್ರಥಮ ಪಂಜಾಬಿ ಗಾಯಕರಾಗಿದ್ದಾರೆ ದಿಲ್ಜಿತ್ ದೊಸಾಂಜ್ ಸಿಂಗ್. ಇವರು ಎರಡು ಬಾರಿ ಇಲ್ಲಿ ಗಾಯನ ಪ್ರಸ್ತುತ ಪಡಿಸಿದ್ದಾರೆ. ಆದರೆ, ಅವರು ಎರಡನೇ ಬಾರಿ ಹಾಡಿದ ಸಂದರ್ಭದ ಬಗ್ಗೆ ಒಂದಿಷ್ಟು ವಿವಾದ ಉಂಟಾಗಿದೆ. ವಾಸ್ತವದಲ್ಲಿ ವಿವಾದವಾಗುವಂಥ ಯಾವುದೇ ವಿಷಯ ಇಲ್ಲದಿದ್ದರೂ ದುರುದ್ದೇಶದಿಂದ ಸೋಷಿಯಲ್ ಮೀಡಿಯಾಗಳಲ್ಲಿ ಅವರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಕೋಚೆನ್ ವ್ಯಾಲಿ ಸಂಗೀತ ಕಾರ್ಯಕ್ರಮದಲ್ಲಿ ಹಾಡು ಹಾಡುವ ಸಂದರ್ಭದಲ್ಲಿ ವೀಕ್ಷಕರ ಪೈಕಿ ಯುವತಿಯೊಬ್ಬಳು ಭಾರತದ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಬಂದಿದ್ದಳು. ಇದನ್ನು ಗಮನಿಸಿದ ದೊಸಾಂಜ್ ಸಿಂಗ್, ಈ ಯುವತಿ ನನ್ನ ದೇಶದ ಧ್ವಜವನ್ನು ಇಲ್ಲಿಗೆ ತಂದಿದ್ದಾರೆ. ನನ್ನ ಹಾಡು ನನ್ನ ದೇಶಕ್ಕಾಗಿ ಹಾಗೂ ಎಲ್ಲರಿಗಾಗಿ. ಸಂಗೀತ ಎಲ್ಲರಿಗಾಗಿ ಇದೆ. ದ್ವೇಷ ಹರಡಲು ಅದನ್ನು ಬಳಸಬೇಡಿ ಎಂದು ಹೇಳಿದ್ದರು. ಆದರೆ, ಅವರ ಈ ಹೇಳಿಕೆಯನ್ನು ಕೆಲವೊಬ್ಬರು ತಿರುಚಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ದೊಸಾಂಜ್ ಸಿಂಗ್ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಇವರು ಆರೋಪಿಸಿದ್ದಾರೆ.
ಯುವತಿಯೊಬ್ಬಳು ಭಾರತದ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ದ್ವೇಷವನ್ನು ಹರಡುತ್ತಿದ್ದಾಳೆ ಎಂದು ದೊಸಾಂಜ್ ಹೇಳಿದ್ದಾರೆ ಎಂದು ಅವರ ವಿರೋಧಿಗಳು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ದೊಸಾಂಜ್ ಕೂಡಲೇ ಪ್ರತಿಕ್ರಿಯೆ ನೀಡಿದ್ದಾರೆ. ಇದು ನನ್ನ ದೇಶದ ರಾಷ್ಟ್ರಧ್ವಜ. ಅದನ್ನು ಆಕೆ ಇಲ್ಲಿಗೆ ತಂದಿದ್ದಾರೆ. ಅಂದರೆ ಆಕೆ ನನ್ನ ಗಾಯನವನ್ನು ನನ್ನ ದೇಶಕ್ಕೆ ತಲುಪಿಸುತ್ತಿದ್ದಾಳೆ. ಒಂದು ವೇಳೆ ನಿಮಗೆ ಪಂಜಾಬಿ ಅರ್ಥವಾಗದಿದ್ದರೆ ಗೂಗಲ್ ಮಾಡಿ ತಿಳಿದುಕೊಳ್ಳಿ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.