ಕರ್ನಾಟಕ

karnataka

ETV Bharat / entertainment

ಧೀರೆನ್ ರಾಮ್‌ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಶಿವ 143' ಆ.26 ರಂದು ತೆರೆಗೆ

ಡಾ.ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ನಟ ಧೀರೆನ್ ರಾಮ್‌ಕುಮಾರ್ ಹಾಗೂ ಮಾನ್ವಿತಾ ಕಾಮತ್ ಅಭಿನಯದ ಬಹುನಿರೀಕ್ಷಿತ ಚೊಚ್ಚಲ ಚಿತ್ರ 'ಶಿವ 143' ಅಂತಿಮವಾಗಿ ಬಿಡುಗಡೆ ದಿನಾಂಕ ಘೋಷಿಸಿದೆ. ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರ ಆ. 26 ರಂದು ತೆರೆಗೆ ಬರಲಿದೆ.

shiva 143 Movie
ಧೀರೇನ್ ರಾಮ್‌ಕುಮಾರ್ ಅಭಿನಯದ ಶಿವ 143 ಸಿನಿಮಾ

By

Published : Aug 13, 2022, 9:05 AM IST

ಡಾ.ರಾಜ್ ಕುಮಾರ್ ಕುಟುಂಬದ ಕುಡಿಗಳಾದ ವಿನಯ್ ರಾಜ್ ಕುಮಾರ್, ಧನ್ಯಾ ರಾಮ್‌ ಕುಮಾರ್ ಹಾಗೂ ಯುವರಾಜ್ ಕುಮಾರ್ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಇದೀಗ ಡಾ.ರಾಜಕುಮಾರ್ ಮೊಮ್ಮಗ ಹಾಗೂ ಪೂರ್ಣಿಮಾ ಮತ್ತು ರಾಮ್ ಕುಮಾರ್ ಮಗ ಧೀರೆನ್ ರಾಮ್‌ಕುಮಾರ್ ''ಶಿವ 143' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಈಗಾಗಲೇ ಚಿತ್ರದ ಹಾಡುಗಳು ಮತ್ತು ಟ್ರೈಲರ್​​ನಿಂದಲೇ ಸದ್ದು ಮಾಡುತ್ತಿರುವ ಶಿವ 143 ಚಿತ್ರದ ಬಿಡುಗಡೆ ಮುಹೂರ್ತ ಫಿಕ್ಸ್ ಆಗಿದೆ. ಆ. 26 ರಂದು‌ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು. ಈ ಬಗ್ಗೆ ಮಾತನಾಡಿದ ಧೀರೆನ್ ರಾಮ್‌ಕುಮಾರ್ ನಾನು ನಮ್ಮ ಕುಟುಂಬದವರ ಬಳಿ ಈ ಸಿನಿಮಾ ಕಥೆ ಬಗ್ಗೆ ಚರ್ಚಿಸಿದಾಗ ನಿನಗೆ ಸರಿ ಹೊಂದುವುದಾದರೆ ಮಾಡು ಎಂದರು.

ನನಗೂ ಈ ಕಥೆ ಇಷ್ಟವಾಗಿತ್ತು. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಕೊರೊನಾ ಕಾರಣದಿಂದ ಬಿಡುಗಡೆ ತಡವಾಗಿದೆ. ಶಿವಣ್ಣ ಮಾಮ ಹಾಗೂ ಗೀತಾ ಆಂಟಿ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಭೇಟಿ‌ ನೀಡಿ ಶುಭ ಹಾರೈಸಿದ್ದರು. ರಾಘಣ್ಣ ಮಾಮ ಅವರ ಹಾರೈಕೆ ಸದಾ ಇದೆ ಎಂದರು.

ಶಿವ 143 ಚಿತ್ರ ತಂಡ

ಇನ್ನು ಯಾರ ಬಳಿಯು ಹೇಳದ ವಿಷಯವೊಂದು ಇಂದು ಹೇಳುತ್ತಿದ್ದೇನೆ. ಮೈಸೂರಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲೇ ಅಪ್ಪು ಮಾಮ‌ "ಜೇಮ್ಸ್" ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಾಹಸ ನಿರ್ದೇಶಕ ರವಿವರ್ಮ ಅವರು ಎರಡೂ ಚಿತ್ರಗಳಿಗೂ ಸಾಹಸ ಸಂಯೋಜನೆ ಮಾಡುತ್ತಿದ್ದರು‌. ನಾನು ಪಾಲ್ಗೊಂಡ ಸಾಹಸ ದೃಶ್ಯವೊಂದರ ತುಣುಕನ್ನು ಅವರು, ಅಪ್ಪು ಮಾಮ ಅವರಿಗೆ ತೋರಿಸಿದರಂತೆ. ಅದನ್ನು ನೋಡಿದ ಅಪ್ಪು ಮಾಮ, ಸ್ನೇಹಿತರೊಬ್ಬರ ಬಳಿ ಅವನ ಕಣ್ಣು ನೋಡಿ ಎಷ್ಟು ಚೆನ್ನಾಗಿದೆ. ನಮ್ಮ ಕುಟುಂಬದಿಂದ ಒಳ್ಳೆಯ ಹೀರೋ ಬರುತ್ತಿದ್ದಾನೆ ಎಂದು ತುಂಬಾ ಸಂತೋಷ ಪಟ್ಟಿದ್ದರಂತೆ.

ಈ ವಿಷಯವನ್ನು ನನಗೆ ಎಷ್ಟೋ ದಿನಗಳ ಬಳಿಕ ಆ ಸ್ನೇಹಿತರು ಹೇಳಿದರು. ಅಶ್ವಿನಿ ಆಂಟಿ ‌ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಅವರು ಬಿಡುಗಡೆ ಮಾಡಿಕೊಟ್ಟಿದ್ದು, ನನಗೆ ಅಪ್ಪು ಮಾಮ ಬಿಡುಗಡೆ ಮಾಡಿದಷ್ಟೇ ಖುಷಿಯಾಗಿದೆ ಎಂದರು.

ಧೀರೇನ್ ರಾಮ್‌ಕುಮಾರ್ ಹಾಗೂ ಪುನೀತ್​ ರಾಜ್​​ಕುಮಾರ್​

ದಿಲ್ ವಾಲಾ ಹಾಗೂ ರ‍್ಯಾಂಬೋ-2 ಸಿನಿಮಾಗಳನ್ನ ನಿರ್ದೇಶನ ಮಾಡಿರುವ ನಿರ್ದೇಶಕ ಅನಿಲ್ ಕುಮಾರ್ 'ಶಿವ 143' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿದ ಅನಿಲ್‌ ಕುಮಾರ್ ಇದು ಲಾಕ್​​​ಡೌನ್ ಪೂರ್ವದಲ್ಲೇ ತಯಾರಾದ ಸಿನಿಮಾ. ಕೊರೊನಾ ಕಾರಣದಿಂದ ಬಿಡುಗಡೆ ವಿಳಂಬವಾಯಿತು. ಆನಂತರ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿದ್ದವು. ಇದು ವಿಭಿನ್ನ ಪ್ರೇಮಕಥೆ ಚಿತ್ರ. ಜಯಣ್ಣ ಫಿಲಂಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ.

ನಿರ್ಮಾಪಕರು ಹಾಗೂ ಧೀರೆನ್ ಅವರ ಕುಟುಂಬದವರು ಕುಳಿತು, ಅವರಿಗೆ ಇಂತಹ ಕಥೆ ಇದ್ದರೆ ಚೆನ್ನ ಎಂದು ತಿರ್ಮಾನಿಸಿದ್ದರು. ನಾನು ಆನಂತರ ತಂಡ ಸೇರಿಕೊಂಡೆ. ಧೀರೆನ್ ರಾಮ್‌ಕುಮಾರ್ ಅವರಿಗೆ ಈ ಮಾಸ್ ಲುಕ್ ಸರಿ ಹೊಂದುವುದೊ, ಇಲ್ಲವೋ? ಎಂಬ ಯೋಚನೆಯಿತ್ತು. ಅವರ ನಟನೆ ನೋಡಿ ಅದು ದೂರಾಯಿತು. ನಾಯಕಿ ಮಾನ್ವಿತ ಕಾಮತ್ ಹಾಗೂ ಚರಣ್ ರಾಜ್ ಅವರ ಅಭಿನಯ‌ ಕೂಡ ತುಂಬಾ ಚೆನ್ನಾಗಿದೆ. ಸಾಧು ಕೋಕಿಲ ಹಾಗೂ ಚಿಕ್ಕಣ್ಣ ಅವರ ಕಾಮಿಡಿ ಮೋಡಿ ಮಾಡಲಿದೆ ಎಂದರು.

ಈ ಚಿತ್ರಕ್ಕೆ ಶಿವ ಅವರ ಛಾಯಾಗ್ರಹಣವಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಜಯಣ್ಣ, ಭೋಗೇಂದ್ರ ಹಾಗೂ ಡಾ. ಸೂರಿ ಈ‌ ಸಿನಿಮಾವನ್ನ‌ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:ಚೊಚ್ಚಲ ಸಿನಿಮಾದಲ್ಲೇ ಮಾನ್ವಿತಾ ಜತೆ ಲಿಪ್‌ಲಾಕ್ ಮಾಡಿದ ಧೀರೇನ್ ರಾಮ್‌ಕುಮಾರ್

ABOUT THE AUTHOR

...view details