ಮಂಡ್ಯ ಭಾಷೆ ಹಾಗೂ ಹಾಸ್ಯ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಹೊಂದಿರುವ ನಟ ಅಂದ್ರೆ ಚಿಕ್ಕಣ್ಣ. ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಸಿನಿಮಾ ಪ್ರೇಕ್ಷಕರನ್ನ ನಕ್ಕು ನಲಿಸುತ್ತಿದ್ದ ಚಿಕ್ಕಣ್ಣ, ಈಗ ತಾವೇ ಹೀರೋ ಆಗಿ ಮಿಂಚಲು ಸಿದ್ಧರಾಗಿದ್ದಾರೆ. 'ಅಧ್ಯಕ್ಷ' ಚಿತ್ರದಲ್ಲಿ ನಾನು 'ಉಪಾಧ್ಯಕ್ಷ' ಅಂತಾ ಪ್ರಖ್ಯಾತಿ ಹೊಂದಿದ್ದ ಅವರು, ಈಗ ಪೂರ್ಣ ಪ್ರಮಾಣದಲ್ಲಿ 'ಉಪಾಧ್ಯಕ್ಷ'ನಾಗಲಿದ್ದಾರೆ.
'ಉಪಾಧ್ಯಕ್ಷ' ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕಿ ಸ್ಮಿತಾ ಉಮಾಪತಿ ಹಾಗೂ ನಾಯಕ ಚಿಕ್ಕಣ್ಣ ಅವರ ತಾಯಿ ಆರಂಭ ಫಲಕ ತೋರಿದರು. ಸಾಧು ಕೋಕಿಲ ಕ್ಯಾಮರಾಕ್ಕೆ ಚಾಲನೆ ನೀಡಿದರು.
ಸಿನಿಮಾ ಬಗ್ಗೆ ಮಾತನಾಡಿರೋ ಚಿಕ್ಕಣ್ಣ, ನನಗೆ 'ರಾಜಾಹುಲಿ','ಅಧ್ಯಕ್ಷ' ಚಿತ್ರಗಳ ನಂತರ ಹೀರೋ ಆಗಲು ಸಾಕಷ್ಟು ಅವಕಾಶಗಳು ಬಂತು. ಆದರೆ ನಾನು ಒಪ್ಪಿರಲಿಲ್ಲ. ಈ ಚಿತ್ರ ಕೇಳಿ ಒಪ್ಪಿಕೊಂಡೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ. ಒಬ್ಬ ಹಾಸ್ಯ ಕಲಾವಿದ ನಾಯಕನಾಗಿ ನಟಿಸುತ್ತಾನೆ ಎಂದರೆ, ಚಿಕ್ಕ ಬಜೆಟ್ನಲ್ಲಿ ಮುಗಿಸುತ್ತಾರೆ.
ಆದರೆ, ನಮ್ಮ ನಿರ್ಮಾಪಕರು ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ನಿರ್ದೇಶಕ ಅನಿಲ್ ಕುಮಾರ್ ನನಗೆ ಬಹಳ ದಿನಗಳ ಪರಿಚಯ. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಚಿತ್ರ ಗೆಲ್ಲುವುದು ಖಂಡಿತಾ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಧಾರಾವಾಹಿಯಲ್ಲಿ ಗಮನ ಸೆಳೆದಿರುವ ಯುವ ನಟಿ ಮಲೈಕಾ ಅವರು ಚಿಕ್ಕಣ್ಣಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಸ್ಯ ನಟ ಧರ್ಮಣ್ಣ ಈ ಚಿತ್ರದಲ್ಲಿ ಚಿಕ್ಕಣ್ಣ ಸ್ನೇಹಿತನಾಗಿ ಅಭಿನಯಿಸುತ್ತಿದ್ದಾರೆ.