ಮುಂಬೈ(ಮಹಾರಾಷ್ಟ್ರ):ಸ್ತನ ಕ್ಯಾನ್ಸರ್ಗೆ ಒಳಗಾಗಿದ್ದ ನಟಿ ಛಾವಿ ಮಿತ್ತಲ್ ಇದೀಗ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಆಸ್ಪತ್ರೆಯಿಂದಲೇ ಇನ್ಸ್ಟಾಗ್ರಾಂನಲ್ಲಿ ಫೋಟೋ ಹರಿಬಿಡುವುದರ ಮೂಲಕ ತಾವು ಕ್ಯಾನ್ಸರ್ನಿಂದ ಗುಣಮುಖರಾಗಿರುವುದಾಗಿ ತಿಳಿಸಿದ್ದಾರೆ.
ಏಪ್ರಿಲ್ 17ರಂದು ನಟಿಗೆ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾಗಿದ್ದು ಇದೀಗ ಆಸ್ಪತ್ರೆಯಿಂದಲೇ ಸೆಲ್ಫಿ ಫೋಟೋ ಹಂಚಿಕೊಂಡಿದ್ದಾರೆ. ಇವರಿಗೆ ಸುಮಾರು ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಇದೇ ವೇಳೆ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ನಟಿ, ನನಗೋಸ್ಕರ ಪ್ರಾರ್ಥನೆ, ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನೋವಿನ ಸಮಯದಲ್ಲಿ ಧೈರ್ಯ ತುಂಬಿದ್ದಕ್ಕಾಗಿ ನಾನು ಆಭಾರಿ ಎಂದಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿರುವ ಮಿತ್ತಲ್, ತಮ್ಮ ಪತಿ ಮೋಹಿತ್ ಹುಸೇನ್ ಅವರಿಗೆ ಈ ಫೋಟೋ ಟ್ಯಾಗ್ ಮಾಡಿದ್ದು, ನನ್ನ ಶಕ್ತಿಯ ಆಧಾರ ಸ್ತಂಭವಾಗಿದ್ದು, ಅವರಿಲ್ಲದೇ ನಾನಿದನ್ನು ಎದುರಿಸಲು ಸಾಧ್ಯವೇ ಇರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಾಲಿವುಡ್ನ ಬಣ್ಣದ ಜಗತ್ತಿಗೆ ಕಾಲಿಡಲಿರುವ ಸೆಲೆಬ್ರಿಟಿ ಸ್ಟಾರ್ ಕಿಡ್!
'ಬಂದಿನಿ' ಮತ್ತು ಯೂಟ್ಯೂಬ್ ಸರಣಿಯ 'ದಿ ಬೆಟರ್ ಹಾಫ್' ನಂತಹ ಕಾರ್ಯಕ್ರಮಗಳಲ್ಲಿ ನಟನೆ ಮಾಡಿ ಫೇಮಸ್ ಆಗಿರುವ ಛಾವಿ, ಕಳೆದ ಕೆಲ ದಿನಗಳ ಹಿಂದೆ ತಮಗೆ ಕ್ಯಾನ್ಸರ್ ಇರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.