ಆಲಿಯಾ ಭಟ್ ಅಭಿನಯದ 'ಡಾರ್ಲಿಂಗ್ಸ್' ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ. ಈ ಸಿನಿಮಾದಲ್ಲಿ ಗಂಡಸರ ಮೇಲಿನ ದೌರ್ಜನ್ಯವನ್ನು ಪ್ರಚೋದಿಸುವಂತಹ ದೃಶ್ಯಗಳು ಇವೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಹಾಗಾಗಿ ಈ ಸಿನಿಮಾವನ್ನು ಬಹಿಷ್ಕಾರ ಮಾಡಲು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ನೆಟ್ಫ್ಲಿಕ್ಸ್ನಲ್ಲಿ ಆ. 5ರಂದು ಈ ಸಿನಿಮಾ ಬಿಡುಗಡೆಯಾಗಿದೆ. ರಿಲೀಸ್ ಹೊಸ್ತಿಲಿನಲ್ಲಿ #Boycott Darlings, #Boycott Alia Bhatt ಹ್ಯಾಶ್ ಟ್ಯಾಗ್ಗಳು ಟ್ರೆಂಡ್ ಆಗಿವೆ.
ಹಿಂದಿ ಚಿತ್ರರಂಗದ ಸ್ಥಿತಿ ಸದ್ಯ ಕಷ್ಟದಲ್ಲಿದೆ. ಜನರು ಚಿತ್ರಮಂದಿರಕ್ಕೆ ಬಂದು ಬಾಲಿವುಡ್ ಸಿನಿಮಾಗಳನ್ನು ನೋಡಲು ಹಿಂದೇಟು ಹಾಕುತ್ತಿದ್ದಾರೆ. ನೇರವಾಗಿ ಒಟಿಟಿ ಮೂಲಕ ರಿಲೀಸ್ ಮಾಡಿದರೆ ಉತ್ತಮ ಎಂಬುದು ಕೆಲವು ನಿರ್ಮಾಪಕರ ಅಭಿಪ್ರಾಯ. ಅದೇ ರೀತಿ ಡಾರ್ಲಿಂಗ್ಸ್ ಕೂಡ ಒಟಿಟಿ ಮೂಲಕ ಬಿಡುಗಡೆ ಆಗಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಅದನ್ನು ಕಂಡು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತನಗೆ ಹಿಂಸೆ ನೀಡಿದ ಗಂಡನನ್ನು ಕಿಡ್ನಾಪ್ ಮಾಡಿ, ಆತನಿಗೂ ಅದೇ ರೀತಿಯಲ್ಲಿ ಹಿಂಸೆ ನೀಡುವ ಮೂಲಕ ಸೇಡು ತೀರಿಸಿಕೊಳ್ಳುವ ಪತ್ನಿಯ ಕಥೆ ಈ ಸಿನಿಮಾದಲ್ಲಿ ಇದೆ. ಗಂಡನಿಗೆ ಮನಬಂದಂತೆ ಥಳಿಸುವ ಹೆಂಡತಿಯಾಗಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ಗಂಡಸರ ಮೇಲಿನ ದೌರ್ಜನ್ಯವನ್ನು ಪ್ರಚೋದಿಸಲಾಗುತ್ತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.