ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಕೆಡಿ'ಯಾಗಿ ಅಬ್ಬರಿಸುವುದಕ್ಕೆ ಸಜ್ಜಾಗಿದ್ದಾರೆ. ಕೆಜಿಗಟ್ಟಲೇ ತೂಕ ಇಳಿಸಿಕೊಂಡು ಅಖಾಡಕ್ಕೆ ಇಳಿಯಲು 'ಪೊಗರು' ಪೋರ ರೆಡಿಯಾಗಿದ್ರೆ, ಧ್ರುವ ಎದುರು ಸಂಜು ಬಾಬಾನನ್ನು ತಂದು ನಿಲ್ಲಿಸಲು ಕನ್ನಡ ಚಿತ್ರರಂಗದಲ್ಲಿ ಡೈರೆಕ್ಟರ್ ಜೋಗಿ ಪ್ರೇಮ್ ನೀಲನಕ್ಷೆ ರೂಪಿಸಿದ್ದಾರೆ.
ಜೋಗಿ ಪ್ರೇಮ್ ಸಿನಿಮಾಗಳಂದ್ರೆ ಭಾರಿ ಸೌಂಡ್ ಇರುತ್ತೆ. ಬ್ರ್ಯಾಂಡ್ ಕೂಡಾ ಇದೆ. ಹೊಸ ಸಿನಿಮಾ ಅನೌನ್ಸ್ ಮಾಡಿದಾಗಿನಿಂದ ರಿಲೀಸ್ ಆಗುವವರೆಗೂ ಸುದ್ದಿಯಲ್ಲಿರುವಂತೆ ನೋಡಿಕೊಳ್ಳುವ ಪ್ರೇಮ್, ಇದೀಗ ಆ್ಯಕ್ಷನ್ ಪ್ರಿನ್ಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, 'ಕೆಡಿ' ಅಡ್ಡಕ್ಕೆ ದುಬಾರಿ ಸಂಭಾವನೆ ಕೊಟ್ಟು ಕೆಜಿಎಫ್ ಅಧೀರನನ್ನು ಕರೆದುಕೊಂಡು ಬಂದಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಯಾರಿಗೂ ತಿಳಿಯದಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಕರೆತಂದು ಅಣ್ಣಯ್ಯಪ್ಪ ಪಾತ್ರಕ್ಕೆ ಬಣ್ಣ ಹಾಕಿಸಿ, ಹೊಸ ವರ್ಷಕ್ಕೆ ಫೋಟೋ ರಿವೀಲ್ ಮಾಡುವ ಮೂಲಕ ಸಿನಿಮಾ ಪ್ರೇಮಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದರು. ಈಗ ಅದೇ ರೀತಿ ಸೈಲೆಂಟ್ ಆಗಿಯೇ ಎರಡನೇ ಶೆಡ್ಯೂಲ್ ಶುರು ಮಾಡಿರುವ ಪ್ರೇಮ್, ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ಅವರನ್ನು ಕರೆದುಕೊಂಡು ಬಂದು ಶೂಟಿಂಗ್ ಶುರು ಮಾಡಿದ್ದಾರೆ. ಕೆಡಿ ಚಿತ್ರದ ಎರಡನೇ ಶೆಡ್ಯೂಲ್ ಚಿತ್ರೀಕರಣ ಪ್ರಾರಂಭವಾಗಿದೆ. ವಿಶೇಷ ಅಂದ್ರೆ, ಕೆಡಿ ಚಿತ್ರದ ಶೂಟಿಂಗ್ನಲ್ಲಿ ಸಂಜಯ್ ದತ್ಗೆ ಪ್ರೇಮ್ ಆ್ಯಕ್ಷನ್ ಕಟ್ ಹೇಳಿಲ್ಲ, ಬದಲಿಗೆ ಸ್ಟಾರ್ ಸ್ಟಂಟ್ ಮಾಸ್ಟರ್ ರವಿವರ್ಮ ಆ್ಯಕ್ಷನ್ ಕಟ್ ಹೇಳಿದ್ದಾರೆ.