64 ದಿನಗಳ ಸುದೀರ್ಘ ಪ್ರಯಾಣ ಮುಗಿಸಿಕೊಂಡು ಸ್ನೇಹಿತ್ ಬಿಗ್ ಬಾಸ್ ಮನೆಯಿಂದ ಹೊರಗೆ ಬಿದ್ದಿದ್ದಾರೆ. ಈ ಸೀಸನ್‌ನ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದ ಸ್ನೇಹಿತ್, ಈ ಸೀಸನ್ ಕೊನೆಯ ಕ್ಯಾಪ್ಟನ್ ಕೂಡ ಆಗುವ ಸಾಧ್ಯತೆಯನ್ನು ತೆರೆದಿಟ್ಟೇ ಹೋಗಿದ್ದಾರೆ. ಯಾಕೆಂದರೆ ಅವರೇ ಮನೆಯ ಕ್ಯಾಪ್ಟನ್ ರೂಮ್‌ಗೆ ಬೀಗ ಹಾಕಿದ್ದಾರೆ. ಮನೆಯಿಂದ ಹೊರಗೆ ಬಂದಿದ್ದೇ ಸ್ನೇಹಿತ್ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಗೇಮ್‌ನಲ್ಲಿನ ಛಲ, ನಮ್ರತಾ ಜೊತೆಗಿನ ಸ್ಮರಣೀಯ ಕ್ಷಣಗಳು, ವಿನಯ್ ಜೊತೆಗಿನ ಸ್ನೇಹ, ಕ್ಯಾಪ್ಟನ್ ಆದಾಗ ಮಾಡಿದ ತಪ್ಪುಗಳು ಎಲ್ಲದರ ಬಗ್ಗೆಯೂ ಸ್ನೇಹಿತ್ ಮನಬಿಚ್ಚಿ ಮಾತಾಡಿದ್ದಾರೆ. ಅವರ ಅನುಭವ ಕಥನ ಅವರ ಮಾತಿನಲ್ಲಿ..
"64 ದಿನ ಬಿಗ್ ಬಾಸ್ ಮನೆಯಲ್ಲಿದ್ದು ಹೊರಗೆ ಬಂದಿದ್ದೀನಿ. ಪ್ರತಿ ವಾರವನ್ನು ನಾನು ನನ್ನ ಕೊನೆಯ ವಾರ ಎಂದುಕೊಂಡೇ ಆಡಿದ್ದೇನೆ. ಒಂದು ವಾರ ಗೆದ್ದಿರಬಹುದು, ಒಂದು ವಾರ ಸೋತಿರಬಹುದು. ಎಲ್ಲೋ ಒಳಗಡೆ ಫೀಲಿಂಗ್ ಇತ್ತು. ಸಂಜೆ ಅಲ್ಲಿ ಕೂತಾಗ, ಇವತ್ತು ಹೊರಗೆ ಹೋಗಿ ತಾಜಾ ಗಾಳಿ ಉಸಿರಾಡುತ್ತೇನೆ ಎಂದು ಅನಿಸಿತ್ತು. ನನ್ನ ಇನ್‌ಸ್ಟಿಂಕ್ಟ್ ತುಂಬ ಸ್ಟ್ರಾಂಗ್ ಇದೆ. ಆ ಇನ್‌ಸ್ಟಿಂಕ್ಟ್ ಈವತ್ತು ಎಲ್ಲೋ ಹೊಡಿತಿತ್ತು. ಈವತ್ತೇ ನನ್ನ ಲಾಸ್ಟ್ ಡೇ ಅಂತ."
"ನನಗೆ ಕ್ಯಾಪ್ಟನ್ ಆಗಿ ದುಪ್ಪಟ್ಟು ಅಧಿಕಾರ ಕೊಟ್ಟಾಗ ಒಂದಿಷ್ಟು ತಪ್ಪುಗಳನ್ನು ಮಾಡಿದ್ದೇನೆ. ಆ ತಪ್ಪುಗಳಿಂದ ಒಂದಿಷ್ಟು ಜನ ತೊಂದರೆಯನ್ನೂ ಅನುಭವಿಸಿದ್ದಾರೆ. ಆ ಗಿಲ್ಟ್ ನನಗೆ ಕೊನೆಯ ತನಕ ಕಾಡುತ್ತದೆ. ಅದೊಂದನ್ನು ಬಿಟ್ಟರೆ, ನನ್ನ ಪ್ರಕಾರ ನನ್ನ ಫ್ರೆಂಡ್ಸ್ ಜೊತೆ ಹೇಗಿರ್ತೀನೋ ಹಾಗೇ ಇರ್ತಾ ಇದ್ದೆ. ಅವರಿಗೋಸ್ಕರ ಜೀವ ಕೊಡಲೂ ಸಿದ್ಧವಾಗ್ತಿದ್ದೆ. ಯಾರು ಆಗಲ್ವೋ ಅವ್ರು ಆಗಲ್ಲ ಅಷ್ಟೇ. ತೀರಾ, ಗೇಮ್‌ಗೋಸ್ಕರ ರಾಜಿ ಮಾಡಿಕೊಂಡಿಲ್ಲ. ನನ್ನ ಫ್ರೆಂಡ್ಸ್‌ಗೆ ಕೊನೆ ಕ್ಷಣದ ತನಕವೂ ನಿಷ್ಠನಾಗಿದ್ದೆ. ನಂಗೆ ಯಾರು ಆಗಲ್ವೋ ಅವರನ್ನು ಅವಾಯ್ಡ್ ಮಾಡ್ತಿದ್ದೆ."
ಕಳೆದ ವಾರ ಬೆಸ್ಟ್: "ನಾನು ಕಳೆದ ವಾರ ಎಲಿಮಿನೇಷನ್‌ನಲ್ಲಿದ್ದ ಕೊನೆಯ ಇಬ್ಬರು ಸ್ಫರ್ಧಿಗಳಲ್ಲಿ ನಾನೂ ಒಬ್ಬನಾಗಿದ್ದೆ. ನನ್ನ ಪ್ರಕಾರ ಆ ವಾರ ನನ್ನ ಬೆಸ್ಟ್ ವಾರ. ಎಷ್ಟು ಟಾಸ್ಕ್ ಗೆದ್ದಿದೀನಿ ಅಂದ್ರೆ, ಮನೆಯಲ್ಲಿ ಸುಮಾರು ಜನ ಇಷ್ಟು ವಾರಗಳಲ್ಲಿಯೂ ಅಷ್ಟೊಂದು ಟಾಸ್ಕ್ ಗೆದ್ದಿಲ್ಲ. ಆದರೆ ಯಾಕೆ ಬಾಟಮ್ ಟು ನಲ್ಲಿದ್ದೆ ಎಂದು ಗೊತ್ತಾಗಿರಲಿಲ್ಲ. ಗೊತ್ತಿಲ್ಲ ನನಗೆ, ನನ್ನ ಭಾಷೆಯೋ ಏನೋ ಒಂದು ಜನರ ಜೊತೆಗೆ ಕನೆಕ್ಟ್ ಆಗಿಲ್ವೇನೋ. ಅದನ್ನು ನಾನು ತಿದ್ದಿಕೊಳ್ಳಲು ಪ್ರಯತ್ನಿಸಿದ್ದೇನೆ. ಆದಷ್ಟು ಕನ್ನಡ ಮಾತಾಡಲು ಟ್ರೈ ಮಾಡಿದ್ದೇನೆ."
"ನನ್ನ ಪ್ರಕಾರ ನಾನು ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿದ್ದಿದ್ದೇ ದೊಡ್ಡ ವಿಷಯ. ನನಗೆ ಯಾವುದೇ ರೀತಿಯ ಅಧಿಕಾರ, ನಿಯಮಗಳನ್ನು ಅನುಸರಿಸುವುದು ತುಂಬಾ ಕಷ್ಟ. ಅಷ್ಟು ದಿನ ಬಿಗ್ ಬಾಸ್ ಮನೆಯಲ್ಲಿದ್ದು, ಅಲ್ಲಿನ ನಿಯಮಗಳನ್ನು ಅನುಸರಿಸುತ್ತಾ ಇದ್ದಿದ್ದೇ ದೊಡ್ಡ ವಿಷಯ."
ಮತ್ತೆ ಮನೆಯೊಳಗೆ ಹೋದರೆ…?:"ಮತ್ತೆ ಬಿಗ್‌ಬಾಸ್ ಮನೆಯೊಳಗೆ ಹೋದರೆ ನಾನು ನನ್ನ ಗೇಮ್‌ನಲ್ಲಿ ಏನೂ ಬದಲಾವಣೆ ಮಾಡ್ಕೊಳಲ್ಲ. ಈಗ ಆಡುತ್ತಿದ್ದಷ್ಟೇ ಅಗ್ರೆಸಿವ್ ಆಗಿ ಆಡುತ್ತೇನೆ. ಯಾರ ಜೊತೆಯಲ್ಲಿ ಫ್ರೆಂಡ್ ಆಗಿದ್ನೋ ಅವರ ಜೊತೆಗೆಯೇ ಸ್ನೇಹ ಮುಂದುವರಿಸುತ್ತೇನೆ. ಮನೆಯಲ್ಲಿ ಇನ್ನೊಂದಿಷ್ಟು ಜನರ ಜೊತೆ ನನಗೆ ಹೊಂದಿಕೆ ಆಗುವುದಿಲ್ಲ. ಅವರ ಆದ್ಯತೆಗಳೇ ಬೇರೆ, ನನ್ನ ಆದ್ಯತೆಗಳೇ ಬೇರೆ. ಹಾಗಾಗಿ ಈಗ ನನ್ನನ್ನು ಬಿಗ್ ಬಾಸ್ ಮನೆಯೊಳಗೆ ವಾಪಸ್ ಕಳಿಸಿದರೂ ನಾನು ಹಾಗೆಯೇ ಇರ್ತೀನಿ. ಬದಲಾಗುವುದಿಲ್ಲ."
ನಮ್ಮ ಸ್ನೇಹ ಜೆನ್ಯೂನ್ ಆಗಿತ್ತು:"ನಾವು ಇಲ್ಲಿ ಎಲ್ಲವನ್ನೂ ಬಿಟ್ಟು ಹೊಗಿರ್ತೀವಿ. ನಮ್ಮ ಅಪ್ಪ- ಅಮ್ಮ, ಫ್ರೆಂಡ್ಸ್ ಎಲ್ಲರನ್ನೂ ಬಿಟ್ಟು ಬಿಗ್ ಬಾಸ್ ಮನೆಗೆ ಹೋಗುತ್ತಿರುತ್ತೇವೆ. ಅಲ್ಲಿ ನಮ್ಮ ಫಿಲಾಸಫಿಗೆ ನಮ್ಮ ಸಿದ್ದಾಂತಗಳಿಗೆ ಹೊಂದಿಕೆಯಾಗುವವರನ್ನು ಹುಡುಕಿಕೊಳ್ಳುತ್ತೇವೆ. ನಾನು, ವಿನಯ್ ಮತ್ತು ನಮ್ರತಾ ಬಂಧನ ಅಷ್ಟೇ ಜೆನ್ಯೂನ್ ಆಗಿತ್ತು. ಅದನ್ನು ನೋಡಿ ಉಳಿದವರು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿದ್ದರು. ನಮ್ಮ ಮೂರು ಜನರಲ್ಲಿ ಯಾರನ್ನೋ ಸೇವ್ ಮಾಡಿ, ಇನ್ಯಾರನ್ನೋ ನಾಮಿನೇಟ್ ಮಾಡಿದರೆ ಅವರು ಬಂದು ಪ್ರಶ್ನೆ ಮಾಡುತ್ತಿರಲಿಲ್ಲ. ಆ ಸ್ನೇಹದ ಬಗ್ಗೆ ನನಗೆ ಹೆಮ್ಮೆ ಇದೆ. ಅದೇ ನನ್ನ ಸಮಸ್ಯೆಯಾಗಿದ್ದರೆ ಇಟ್ಸ್ ಓಕೆ."