ನಟ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಶೋ ದಿನದಿಂದ ದಿನಕ್ಕೆ ಪ್ರೇಕ್ಷಕರಿಗೆ ಮನರಂಜನೆ ಹೆಚ್ಚಿಸುತ್ತಿದೆ. ಇಷ್ಟು ದಿನ ಕೋಪ, ಜಗಳ, ದೂಷಣೆಗಳೇ ಹೆಚ್ಚಾಗಿ ಕೇಳಿಸುತ್ತಿದ್ದ ಮನೆಯಲ್ಲಿಂದು ಹಬ್ಬದ ವಾತಾವರಣ. ಅದಕ್ಕೆ ಕಾರಣಗಳು ಹಲವು. ಕಲರ್ಸ್ ಕನ್ನಡದಲ್ಲಿ ಪ್ರಾರಂಭವಾಗುತ್ತಿರುವ ‘ಬೃಂದಾವನ’ ಧಾರಾವಾಹಿ ತಂಡ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ಅವರೊಂದಿಗೆ ನಕ್ಕು ನಲಿದ ಸ್ಪರ್ಧಿಗಳು ಪರ್ಫಾರ್ಮ್ ಮಾಡಿದ್ದಂತೂ ವಿಶೇಷ.
ಅದರ ಜೊತೆಗೆ ಇನ್ನೂ ಹಲವು ಫೀಲ್‌ಗುಡ್ ಸನ್ನಿವೇಶಗಳು ಮನೆಯಲ್ಲಿ ನಡೆಯುತ್ತಿವೆ. ಅದರಲ್ಲಿ ಇಶಾನಿ ಮತ್ತು ಸಂಗೀತಾ ಅವರ ಸಂಗೀತ ಕ್ಲಾಸ್ ಕೂಡ ಒಂದು. ಹೆಸರಿನಲ್ಲಿಯೇ ಮ್ಯೂಸಿಕ್ ಇಟ್ಟುಕೊಂಡಿರುವ ಸಂಗೀತಾ ಅವರು ಎಂದಿಗೂ ಸಂಗೀತ ಪ್ರೇಮಿಯಾಗಿ ಕಾಣಿಸಿಕೊಂಡವರಲ್ಲ. ಇಶಾನಿಯಂತೂ ರ‍್ಯಾಪರ್ ಆಗಿಯೇ ಪ್ರಸಿದ್ಧರಾದವರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಸಂಗೀತ ಸಂಜೆ ನಡೆದಿದೆ.
ಕಾರ್ತಿಕ್ ಮತ್ತು ತನಿಷಾ ಸ್ವಿಮ್ಮಿಂಗ್ ಪೂಲ್ ಬಳಿ ಆರಾಮವಾಗಿ ಮಲಗಿಕೊಂಡು ಹರಟೆ ಹೊಡೆಯುತ್ತಿದ್ದರು. ಅಲ್ಲಿಗೆ ಮೊದಲು ಬಂದಿದ್ದು ಇಶಾನಿ. ನಂತರ ಅವರ ಜೊತೆ ನೀತು, ನಮ್ರತಾ ಬಂದು ಕೂಡಿಕೊಂಡರು. ಆಗಲೇ ಇಶಾನಿ ಬಾಯಲ್ಲಿ, 'ಪರಪ್ಪಪ್ಪಪ್ಪಾ...' ಎಂದು ಸಂಗೀತದ ಫಲಕುಗಳನ್ನು ಹೇಳಲು ಶುರುಮಾಡಿದ್ದರು.
ಮಳೆ ಬರುವ ಹಾಗಿರುವ ಸಂಜೆ ಎಲ್ಲರಲ್ಲಿಯೂ ಹರಟೆ ಮೂಡ್ ಹುಟ್ಟಿಸಿತ್ತು. ನಮ್ರತಾಗೆ ಈ ವಾತಾವರಣದಲ್ಲಿ ಟ್ರಾವೆಲ್ ಮಾಡಬೇಕು ಅನಿಸುತ್ತಿದೆ ಎಂಬ ಅನಿಸಿಕೆಯನ್ನೂ ಹಂಚಿಕೊಂಡರು. ಈ ಮಾತಿನ ನಡುವೆಯೇ ಕಾರ್ತಿಕ್ ಗರ್ಲ್‌ಫ್ರೆಂಡ್ ಬಗ್ಗೆಯೂ ಚರ್ಚೆ ಬಂತು. ‘ಈಗ ಯಾರು ನಿಂಗೆ ಸ್ಪೆಷಲ್ ಫ್ರೆಂಡ್?’ ಎಂದು ನಮ್ರತಾ ಕೇಳಿದರೆ ಕಾರ್ತಿಕ್ ಅಷ್ಟೇ ಚಾಣಕ್ಷತನದಿಂದ, 'ಫ್ರೆಂಡ್ಸೆಲ್ಲ ಸ್ಪೆಷಲ್ಲೇ' ಅಂದ್ರು.
ಈ ಹೊತ್ತಿನಲ್ಲಿ ಗುಂಪಿನಿಂದ ತುಸು ದೂರದಲ್ಲಿ ಬಾಲ್ಕನಿ ಮೇಲೆ, ಮರದ ನೆರಳಿನಲ್ಲಿ ಸಂಗೀತಾ ಕೂತಿದ್ದರು. ಅವರನ್ನು ಸೇರಿಕೊಂಡವರು ಇಶಾನಿ. 'ಇದು ತುಂಬ ಕಾಮ್ ಪ್ಲೇಸ್. ಇಲ್ಲಿನ ಎನರ್ಜಿಯೇ ಡಿಫರೆಂಟ್' ಎಂದರು ಇಶಾನಿ. ಹಕ್ಕಿಗಳ ಕಲರವ, ಮರದ ತಂಪು ಎಲ್ಲದರ ಬಗ್ಗೆ ಸಂಗೀತಾ ಮತ್ತು ಇಶಾನಿ ಮಾತುಕತೆ ಸಾಗಿತು. ಸಂಗೀತಾ ಶಿಳ್ಳೆ ಹಾಕಿ ಹಕ್ಕಿಗಳ ಜೊತೆಗೆ ಮಾತುಕತೆ ನಡೆಸಲೂ ಪ್ರಯತ್ನಿಸಿದರು.