ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 10' ಕೊನೆಯ ಹಂತ ತಲುಪಿದೆ. ದಿನಕ್ಕೊಂದು ವಿಭಿನ್ನ ಟಾಸ್ಕ್, ವೀಕೆಂಡ್ ಎಪಿಸೋಡ್ಗಳು ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದೆ. ಸ್ನೇಹಿತರಾಗಿದ್ದ ಸ್ಪರ್ಧಿಗಳು ಶತ್ರುಗಳಾದ್ರೆ, ಯಾವಾಗಲೂ ಕಿತ್ತಾಡುತ್ತಿದ್ದವರು ದಿಢೀರ್ ಫ್ರೆಂಡ್ಸ್ ಆಗಿಬಿಟ್ಟಿದ್ದಾರೆ. ಇದಕ್ಕೆ ಹೊಸ ಉದಾಹರಣೆಯೇ ಇಂದಿನ ಪ್ರೋಮೋ. 'ವಿನಯ್-ಸಂಗೀತಾ ಸ್ನೇಹದ ಪನ್ನೀರಿನ ಸಿಂಚನ!' ಎಂಬ ಶೀರ್ಷಿಕೆಯೊಂದಿಗೆ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ.
ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ಮನೆಯಲ್ಲಿ ಕಿತ್ತಾಡುತ್ತಲೇ ಇರುತ್ತಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗೋದೇ ಇಲ್ಲ. ಆದರೆ, ನಿನ್ನೆಯವರೆಗೆ ಜಗಳವಾಡುತ್ತಿದ್ದ ಈ ಸ್ಪರ್ಧಿಗಳೀಗ ಬದಲಾಗಿದ್ದಾರೆ. ಈ ವಾರದ ವೀಕೆಂಡ್ ಎಪಿಸೋಡ್ಗಳು ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ನಡೆಯುತ್ತಿದೆ. ಇಂದಿನ ಸಂಚಿಕೆಯನ್ನು ಬಿಗ್ ಬಾಸ್ 7ರ ವಿಜೇತ ಶೈನ್ ಶೆಟ್ಟಿ ಮತ್ತು ಸ್ಪರ್ಧಿ ಶುಭಾ ಪೂಂಜಾ ನಡೆಸಿಕೊಡಲಿದ್ದಾರೆ.
ಇವರಿಬ್ಬರು ಸೇರಿ ಮನೆಯವರಿಗೆ ಟಾಸ್ಕ್ ನೀಡಿದ್ದಾರೆ. ಮೊದಲಿಗೆ ಸಂಗೀತಾ ಮತ್ತು ವಿನಯ್ ಅವರನ್ನು ಮುಂದೆ ನಿಲ್ಲಿಸಿ, ಒಬ್ಬರನೊಬ್ಬರು ಹೊಗಳಿ ಮಾತಾಡುವಂತೆ ಹೇಳಿದ್ದಾರೆ. ಅದರಂತೆ ವಿನಯ್ ಅವರು 'ಈ ಮನೆಯಲ್ಲಿ ಸಂಗೀತಾಗೆ ಇರುವಷ್ಟು ತಾಳ್ಮೆ ಇನ್ಯಾರಿಗೂ ಇಲ್ಲ' ಎಂದಿದ್ದಾರೆ. ಇದಕ್ಕೆ ಸಂಗೀತಾ, 'ವಿನಯ್ ನಟನೆಯನ್ನು ಯಾರೂ ಮೀರಿಸೋಕೆ ಸಾಧ್ಯವಿಲ್ಲ' ಎಂದರು. ಕೂಡಲೇ ವಿನಯ್, 'ಅದನ್ನು ಮೀರಿಸಿದ್ದು ಸಂಗೀತಾ ಒಬ್ಬಳೇ' ಎಂದಿದ್ದಾರೆ. ಇದನ್ನು ಕೇಳಿ ಸಂಗೀತಾ ಸೇರಿ ಮನೆ ಮಂದಿಯೆಲ್ಲಾ ಬಿದ್ದೂ ಬಿದ್ದು ನಕ್ಕರು.