ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್' ಸೀಸನ್ ಹತ್ತರ ಫಿನಾಲೆಗೆ ದಿನಗಣನೆ ಶುರುವಾಗಿದೆ. ಹದಿನಾಲ್ಕು ವಾರಗಳನ್ನು ಯಶಸ್ವಿಯಾಗಿ ಮುಗಿಸಿ ಹದಿನೈದನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕ್ಷಣಕ್ಷಣಕ್ಕೂ ಕುತೂಹಲದ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹಂತದಲ್ಲಿ ಹಿಂತುರುಗಿ ನೋಡಿದ್ರೆ ಕುತೂಹಲಕಾರಿ ಚಿತ್ರಣ ಸಿಗುತ್ತದೆ. ಈ ಬಾರಿ ಮನೆಯೊಳಗಿನ ಸದಸ್ಯರು ಎಷ್ಟು ವೈವಿಧ್ಯಪೂರ್ಣವಾಗಿದ್ದರೋ, ಮನೆಗೆ ಭೇಟಿ ನೀಡಿದ್ದ ಅತಿಥಿಗಳೂ ಕೂಡ ಶೋಗೆ ಅಷ್ಟೇ ಗಾಢವಾದ ಬಣ್ಣವನ್ನು ತುಂಬಿದ್ದಾರೆ. ಹಾಗಾದರೆ ಬಿಗ್ ಬಾಸ್ ಮನೆಯೊಳಗೆ ಈವರೆಗೆ ಎಂಟ್ರಿ ಕೊಟ್ಟು ಕಾರ್ಯಕ್ರಮವನ್ನು ಕಲರ್‍ಫುಲ್ ಮಾಡಿದ ಗೆಸ್ಟ್‌ಗಳು ಯಾರು? ಅವರು ಭೇಟಿ ನೀಡಿದ ಸಂದರ್ಭ ಹೇಗಿತ್ತು?. ಇಲ್ಲಿದೆ ಒಂದು ಚಿತ್ರಣ.
1. ಎಂಎಲ್‌ಎ ಪ್ರದೀಪ್ ಈಶ್ವರ್ ಸ್ಫೂರ್ತಿದಾಯಕ ಮಾತುಗಳು:ಬಿಗ್ ಬಾಸ್ ಶೋನ ಮೊದಲ ಬೆಳಗ್ಗೆ ಒಂದು ಸರ್ಪ್ರೈಸ್ ವಿಸಿಟ್ ಕಾದಿತ್ತು. ಅಂದು ಬೆಳಗ್ಗೆ ಚಿಕ್ಕಬಳ್ಳಾಪುರ ಎಂಎಲ್‌ಎ ಪ್ರದೀಪ್ ಈಶ್ವರ್ ಈ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಸದಸ್ಯರು ಅವರ ಸ್ಫೂರ್ತಿದಾಯಕ ಮಾತು ಕೇಳಿ, ಕಣ್ಣಲ್ಲಿ ನೀರು, ಮನದಲ್ಲಿ ವಿಶ್ವಾಸ ತುಂಬಿಕೊಂಡು ಆಟಕ್ಕೆ ಅಣಿಯಾಗಿದ್ದರು. ಆರಂಭದಲ್ಲಿ ಶಾಸಕರು ಶೋಗೆ ಸ್ಪರ್ಧಿಯಾಗಿ ಹೋಗಿದ್ದಾರೆ ಎಂದು ಊಹಿಸಿದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಕೂಡ ನಡೆದಿತ್ತು. ಆದರೆ, ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಲ್ಲಿ ವಿಶ್ವಾಸ ತುಂಬಿ ಹೊರಗೆ ಬಂದಿದ್ದರು.
2. ಲಾರ್ಡ್ ಪ್ರಥಮ್ ಗ್ರ್ಯಾಂಡ್ ಎಂಟ್ರಿ:ಬಿಗ್ ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ಅವರ ಎಂಟ್ರಿಯಂತೂ ಸಖತ್ ಎಂಟರ್‌ಟೈನಿಂಗ್ ಆಗಿತ್ತು. ತಮ್ಮನ್ನು ತಾವು 'ಲಾರ್ಡ್ ಪ್ರಥಮ್' ಎಂದು ಹೇಳಿಕೊಂಡೇ ಒಳಗೆ ಬಂದ ಅವರು ಮನೆಯ ಸದಸ್ಯರಿಂದ ಭಾರಿ ಸೇವೆ ಮಾಡಿಸಿಕೊಂಡಿದ್ದರು. ಸದಸ್ಯರಿಗೆಲ್ಲ ತಮ್ಮದೇ ಸ್ಟೈಲ್‌ನಲ್ಲಿ ಆರ್ಡರ್ ಮಾಡುತ್ತಾ, ಅವರಿಗೆ ಸಲಹೆ ಸೂಚನೆ ನೀಡುತ್ತಾ ದಿನವಿಡೀ ಬಿಗ್ ಬಾಸ್ ಮನೆಯಲ್ಲಿ ಕಾಲ ಕಳೆದಿದ್ದರು. ಇದು ಬಿಗ್ ಬಾಸ್ ನೀಡಿದ ಟಾಸ್ಕ್ ಇರಬೇಕು ಎಂದು ತಮ್ಮಷ್ಟಕ್ಕೆ ತಾವೇ ಊಹಿಸಿಕೊಂಡ ಸದಸ್ಯರು ಪ್ರಥಮ್ ಮಾತನ್ನು ಚಾಚೂ ತಪ್ಪದೇ ಪಾಲಿಸಿದ್ದರು. ಸಂಗೀತಾ ಅವರಂತೂ ಪ್ರಥಮ್ ಅವರಿಗೆ ಕೈತುತ್ತು ತಿನ್ನಿಸಿದ್ದರು ಕೂಡ. ಆದರೆ ವೀಕೆಂಡ್ ಎಪಿಸೋಡಿನಲ್ಲೇ ತಿಳಿದಿದ್ದು, ಪ್ರಥಮ್ ಅವರನ್ನೆಲ್ಲ ಬಕ್ರಾ ಮಾಡಿದ್ದಾರಂತ. ಅವರು ಹೇಳಿದ ಆಜ್ಞೆಗಳನ್ನು ಪಾಲಿಸಬೇಕು ಎಂದು ಮನೆಯ ಸದಸ್ಯರಿಗೆ ಯಾವ ಸೂಚನೆಯೂ ಬಿಗ್ ಬಾಸ್ ಕಡೆಯಿಂದ ಬಂದಿರಲಿಲ್ಲ. ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು.
3. ದಸರಾಗೆ 'ತಾರಾ' ಮೆರುಗು: ಬಿಗ್ ಬಾಸ್ ಮನೆ ಜಿದ್ದಾಜಿದ್ದಿನ ಟಾಸ್ಕ್‌ಗಳು, ಅದರಲ್ಲಿನ ಜಗಳ, ವಾದವಿವಾಗಳ ಟೆನ್ಷನ್‌ನಲ್ಲಿ ಮುಳುಗಿಹೋಗಿರುವಾಗ 'ದಸರಾ' ಸಂಭ್ರಮಕ್ಕೆ ಮೆರುಗು ನೀಡಲು ಮನೆಯೊಳಗೆ ಬಂದವರು ತಾರಾ ಅನುರಾಧಾ. ಅವರ ಉಪಸ್ಥಿತಿಯಲ್ಲಿ ಮನೆಯ ಸದಸ್ಯರೆಲ್ಲ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಹಾಡು ಹಾಡಿ, ಕುಣಿದು, ಸಂಭ್ರಮಿಸಿದ್ದರು. ತಾರಾ ಪ್ರತೀ ಸದಸ್ಯರನ್ನೂ ಕರೆದು ಅವರ ಶಕ್ತಿ, ಮಿತಿಗಳ ಬಗ್ಗೆ ತಿಳಿಸಿ ಸ್ಫೂರ್ತಿ ತುಂಬಿದ್ದರು.
4. ಭಾಗ್ಯ ತಂದ 'ಸುಷ್ಮಾ': ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ಎನ್ ರಾವ್ ಅವರ ಎಂಟ್ರಿ ಮನೆಮಂದಿಗೆಲ್ಲ ಒಂದು ರೀತಿಯಲ್ಲಿ ಪ್ಲೆಸೆಂಟ್ ಸರ್ಪೈಸ್ ಆಗಿತ್ತು. ಆ ಸಂದರ್ಭ, ವರ್ತೂರು ಸಂತೋಷ್ ಆಗಷ್ಟೇ ಹುಲಿಯುಗುರಿನ ಪ್ರಕರಣ ಎದುರಿಸಿ ಮತ್ತೆ ಮನೆಯೊಳಗೆ ಎಂಟ್ರಿ ಪಡೆದುಕೊಂಡಿದ್ದರು. ಆ ತಳಮಳ ತಾಳಲಾರದೇ ಮನೆಯಿಂದ ಹೊರಗೆ ಹೋಗುವುದಾಗಿ ಹಠ ಹಿಡಿದು ಕುಳಿತಿದ್ದರು. ಸುಷ್ಮಾ ಅವರ ಕಿವಿಮಾತುಗಳು ವರ್ತೂರು ಅವರ ನಿರ್ಧಾರವನ್ನು ತಕ್ಷಣಕ್ಕೆ ಬದಲಿಸಲಿಲ್ಲವಾದರೂ, ಮತ್ತೆ ಆಟ ಆಡುವ ಉತ್ಸಾಹ ತುಂಬಿದ್ದಂತೂ ನಿಜ. ವರ್ತೂರ್ ಅವರಿಗಷ್ಟೇ ಅಲ್ಲ, ತಮ್ಮ ಅತ್ಯಮೂಲ್ಯ ಸಲಹೆಗಳನ್ನು ಮನೆಯ ಎಲ್ಲಾ ಸದಸ್ಯರಿಗೂ ನೀಡಿದ್ದರು.