ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ದಿನಕ್ಕೊಂದು ವಿಭಿನ್ನ ಟಾಸ್ಕ್ಗಳು, ವೀಕೆಂಡ್ ಎಪಿಸೋಡ್ಗಳು ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿವೆ. ಇದೀಗ ಕಾರ್ಯಕ್ರಮ ಕೊನೆಯ ಹಂತ ತಲುಪುತ್ತಿದ್ದು, ಸ್ಪರ್ಧಿಗಳ ನಡುವಿನ ಸ್ಪರ್ಧೆಯೂ ತೀವ್ರಗೊಂಡಿದೆ. ಈ ವಾರ ಡಬಲ್ ಎಲಿಮಿನೇಷನ್ ನಡೆದಿದ್ದು, ಮೈಕಲ್ ಮತ್ತು ಅವಿನಾಶ್ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಇದನ್ನು ಕಂಡು ಸ್ಪರ್ಧಿಗಳು ಶಾಕ್ ಆಗಿದ್ದಾರೆ.
ವಾರದ ದಿನಗಳಲ್ಲಿ ಟಾಸ್ಕ್ ಚಿಂತೆಯಲ್ಲಿರುವ ಸ್ಪರ್ಧಿಗಳಿಗೆ ವಾರಾಂತ್ಯ ಬಂತೆಂದರೆ ಎಲಿಮಿನೇಷನ್ ಬಿಸಿ ಕಾಡುತ್ತದೆ. ನಟ ಸುದೀಪ್ 'ವೀಕೆಂಡ್ ವಿತ್ ಸುದೀಪ್' ಕಾರ್ಯಕ್ರಮ ನಡೆಸಿಕೊಡುತ್ತಾರೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ವಾರವಿಡೀ ಕಾರ್ಯಕ್ರಮ ವೀಕ್ಷಿಸದಿರುವವರೂ ಕೂಡ ಕಿಚ್ಚನಿಗಾಗಿಯೇ ವಾರಾಂತ್ಯದ ಸಂಚಿಕೆಗಳನ್ನು ನೋಡುವುದುಂಟು. ಸುದೀಪ್ ನಿರೂಪಣೆಯ ಶೈಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಈ ವಾರಾಂತ್ಯದ ಕಾರ್ಯಕ್ರಮವನ್ನು ಸುದೀಪ್ ಅವರು ನಡೆಸಿಕೊಟ್ಟಿಲ್ಲ.
ಶನಿವಾರದ ಸಂಚಿಕೆಗೆ ಬಿಗ್ ಬಾಸ್ ವಿಜೇತೆ, ಹಿರಿಯ ನಟಿ ಶ್ರುತಿ ಆಗಮಿಸಿ ನ್ಯಾಯ ಪಂಚಾಯಿತಿ ನಡೆಸಿಕೊಟ್ಟಿದ್ದರು. ಭಾನುವಾರದ ಸಂಚಿಕೆ ಬಿಗ್ ಬಾಸ್ ಸೀಸನ್ 7ರ ವಿಜೇತ ಶೈನ್ ಶೆಟ್ಟಿ ಮತ್ತು ಸ್ಪರ್ಧಿ ಶುಭಾ ಪೂಂಜಾ ನೇತೃತ್ವದಲ್ಲಿ ನಡೆಯಿತು. ಈ ವಾರ ಒಟ್ಟು 6 ಜನ ನಾಮಿನೇಟ್ ಆಗಿದ್ದರು. ಅವರಲ್ಲಿ ಸಂಗೀತಾ ಶೃಂಗೇರಿ ಶನಿವಾರವೇ ಸೇಫ್ ಆಗಿದ್ದರು. ಇವರನ್ನು ಬಿಟ್ಟರೆ ಭಾನುವಾರ ಪ್ರತಾಪ್, ವರ್ತೂರು ಸಂತೋಷ್ ಮತ್ತು ಸಿರಿ ಸೇಫ್ ಆದರು.