ಕರ್ನಾಟಕ

karnataka

ETV Bharat / entertainment

ಭಾರತದಲ್ಲಿ ಹೊಸ ದಾಖಲೆ ಬರೆದ 'ಅವತಾರ್ 2': ಭರ್ಜರಿ ಕಲೆಕ್ಷನ್!, ಎಷ್ಟು ಗೊತ್ತಾ? - HIGHEST GROSSING Hollywood film

ಅವತಾರ್ 2 ಭಾರತದಲ್ಲಿ ಹೊಸ ಇತಿಹಾಸ ರಚಿಸಿದೆ. ಇದುವರೆಗೆ ಭಾರತದ ಬಾಕ್ಸ್ ಆಫೀಸ್​ನಲ್ಲಿ 368 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದ್ದು, ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಚಲನಚಿತ್ರವಾಗಿ ಹೊರಹೊಮ್ಮಿದೆ.

Avatar 2
ಅವತಾರ್ 2

By

Published : Jan 22, 2023, 9:20 AM IST

ಮುಂಬೈ: ಜೇಮ್ಸ್ ಕ್ಯಾಮರೂನ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಅವತಾರ್: ದಿ ವೇ ಆಫ್ ವಾಟರ್ ' ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಚಲನಚಿತ್ರವಾಗಿ ಹೊಸ ದಾಖಲೆ ಬರೆದಿದೆ. ಭಾರತದಲ್ಲಿ 'ಅವೆಂಜರ್ಸ್: ಎಂಡ್‌ಗೇಮ್'ಗಿಂತಲೂ ಅವತಾರ್ 2 ಹೆಚ್ಚು ಹಣ ಗಳಿಸಿದೆ. ಇದುವರೆಗೆ 368 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ಗುರುವಾರ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ವೊಂದನ್ನು ಮಾಡಿ, "ಅವತಾರ್ 2 ಭಾರತದಲ್ಲಿ ಇತಿಹಾಸ ಸೃಷ್ಟಿಸುತ್ತಿದೆ. 'ಅವೆಂಜರ್ಸ್ ಎಂಡ್‌ಗೇಮ್' ಸಿನಿಮಾದ ಗಳಿಕೆ ಹಿಂದಿಕ್ಕಿ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಹಾಲಿವುಡ್ ಚಲನಚಿತ್ರವಾಗುತ್ತಿದೆ. ಇದುವರೆಗೆ 'ಅವತಾರ್: ದಿ ವೇ ಆಫ್ ವಾಟರ್' ಚಿತ್ರ 368.20 ಕೋಟಿ ರೂ. ಗಳಿಸಿದ್ದು, ಅವೆಂಜರ್ಸ್: ಎಂಡ್‌ಗೇಮ್ ಬಾಕ್ಸ್​ ಆಫೀಸ್​ನಲ್ಲಿ​ 367 ಕೋಟಿ ರೂ ಕೊಳ್ಳೆ ಹೊಡೆದಿತ್ತು" ಎಂದು ತಿಳಿಸಿದ್ದಾರೆ.

ಹೀಗಿದೆ ಕಲೆಕ್ಷನ್‌..: ಅಷ್ಟೇ ಅಲ್ಲ, ಅವತಾರ್ 2 ಬಿಡುಗಡೆಯಾದ ವಾರದಿಂದ ಹಂತಹಂತವಾಗಿ ಎಷ್ಟು ಕಲೆಕ್ಷನ್​ ಮಾಡಿದೆ ಎಂಬ ಮಾಹಿತಿ ನೀಡಿದ್ದಾರೆ. ಮೊದಲನೇ ವಾರ: 182.90 ಕೋಟಿ ರೂ., 2ನೇ ವಾರ: 98.49 ಕೋಟಿ ರೂ., 3ನೇ ವಾರ: 54.53 ಕೋಟಿ ರೂ., 4ನೇ ವಾರ: 21.53 ಕೋಟಿ ರೂ., 5ನೇ ವಾರ: 9.45 ಕೋಟಿ ರೂ., 6ನೇ ವಾರ (ಶುಕ್ರವಾರದ ವರೆಗೆ): 1.30 ಕೋಟಿ ರೂ ಬಾಚಿಕೊಂಡಿದ್ದು, ಒಟ್ಟು 368.20 ಕೋಟಿ ರೂ. ಗಳಿಸಿದೆ.

ಯುಎಸ್ ಮೂಲದ ಮನರಂಜನಾ ಪೋರ್ಟಲ್​ ನೀಡಿದ ವರದಿಯಂತೆ, 'ಅವತಾರ್: ದಿ ವೇ ಆಫ್ ವಾಟರ್' 2022 ರ ಅಂತ್ಯದ ವೇಳೆಗೆ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1 ಬಿಲಿಯನ್​ ಡಾಲರ್ (1 ಶತಕೋಟಿ ಡಾಲರ್)​ ದಾಖಲೆಯನ್ನು ಸರಿಗಟ್ಟಿದೆ. ಬಿಡುಗಡೆಯಾದ ದಿನದಿಂದ ಕೇವಲ 14 ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಸಿನಿಮಾ ಇಷ್ಟು ದೊಡ್ಡಮಟ್ಟ ಹಣ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದೆ.

ದಾಖಲೆ ಬರೆದ ಸಿನಿಮಾಗಳಿವು..: 2022 ರಲ್ಲಿ ಅವತಾರ್ ​2 ಬಿಡುಗಡೆಗೂ ಮುನ್ನಾ ಕೇವಲ ಎರಡು ಚಲನಚಿತ್ರಗಳು ಮಾತ್ರ ಹಾಲಿವುಡ್​ನಲ್ಲಿ ಭಾರಿ ಹೆಸರು ಮಾಡಿದ್ದವು. 'ಟಾಪ್ ಗನ್: ಮೇವರಿಕ್' ಮತ್ತು 'ಜುರಾಸಿಕ್ ವರ್ಲ್ಡ್ ಡೊಮಿನಿಯನ್'. ಆದ್ರೆ, ಜೇಮ್ಸ್ ಕ್ಯಾಮರೂನ್ ಅವರ 'ಅವತಾರ್ ದಿ ವೇ ಆಫ್ ವಾಟರ್' ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವೇಗ ಪಡೆದುಕೊಂಡು ಈ ಎರಡೂ ಸಿನಿಮಾಗಳನ್ನು ಮೀರಿ, ನಿರೀಕ್ಷಿತ ಮೈಲಿಗಲ್ಲು ದಾಟಿ ದಾಖಲೆ ಸಾಧಿಸಿದೆ.

ಇದನ್ನೂ ಓದಿ:ಅವತಾರ್​ 2 ಅಬ್ಬರ.. ಮೊದಲ ದಿನದ ಕಲೆಕ್ಷನ್​ ಜೋರು

ಉತ್ತರ ಅಮೆರಿಕದಲ್ಲಿ ತೀವ್ರ ಚಳಿ, ಹವಾಮಾನ ವೈಪರೀತ್ಯ ಮತ್ತು ಕೋವಿಡ್ ವೈರಸ್​ ಸಂಕಷ್ಟವಿದೆ. ಆದ್ರೂ, 'ಅವತಾರ್ 2' ಮುಂದಿನ ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಗಮನಾರ್ಹ ಆದಾಯ ಗಳಿಸುವ ನಿರೀಕ್ಷೆಯಿದೆ.

ಸಿನಿಮಾ ಕಥೆ ಏನು?: 'ಅವತಾರ್​' 2009ರಲ್ಲಿ ತೆರೆಕಂಡು ವಿಶ್ವಾದ್ಯಂತ ಧೂಳೆಬ್ಬಿಸಿದ ಜೇಮ್ಸ್​ ಕ್ಯಾಮರೂನ್​ ಅವರ ಚಿತ್ರ. ಭೂಮಿಯಂತೆ ಕಾಣುವ ಆಕರ್ಷಕ ಪಂಡೋರಾ ಜಗತ್ತಿನಲ್ಲಿ ವಾಸಿಸುವ ವಿಶೇಷ ಜಲಚರಗಳ ಕಥೆ ಇದರಲ್ಲಿದೆ. ಪರದೆ ಮೇಲೆ ಬರುವ ಒಂದೊಂದು ದೃಶ್ಯವೂ ಕೂಡ ರೋಮಾಂಚನಕಾರಿಯಾಗಿದೆ. ಇದೀಗ ಅದರ ಮುಂದುವರಿದ ಭಾಗ ಅವತಾರ್​ 2 ಬಿಡುಗಡೆಯಾಗಿ ಸಿನಿ ರಸಿಕರನ್ನು ಮೋಡಿ ಮಾಡುತ್ತಿದೆ. 2009ರಲ್ಲಿ ಬಿಡುಗಡೆಯಾದ ಮೊದಲ 'ಅವತಾರ್' ಚಿತ್ರವು 162 ನಿಮಿಷಗಳ ಅವಧಿ ಹೊಂದಿತ್ತು. ಅಂದರೆ 2 ಗಂಟೆ 42 ನಿಮಿಷಗಳು. 'ಅವತಾರ್ 2' ಅವಧಿಯು 192 ನಿಮಿಷಗಳು, 10 ಸೆಕೆಂಡುಗಳು. ಅಂದರೆ, 3 ಗಂಟೆ 12 ನಿಮಿಷ 10 ಸೆಕೆಂಡುಗಳು. ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು ಮತ್ತೊಂದು ಹೊಸ ಲೋಕಕ್ಕೆ ಕೊಂಡೊಯ್ಯುತ್ತಿದೆ.

ಇದನ್ನೂ ಓದಿ:ವಿಶ್ವಾದ್ಯಂತ ಅವತಾರ್ 2 ರಿಲೀಸ್​: ಪಂಡೋರಾ ಜಗತ್ತು ಕಂಡು ಸಿನಿಪ್ರಿಯರು ಫಿದಾ

ABOUT THE AUTHOR

...view details