ಕಿರುತೆರೆ ಲೋಕದಲ್ಲಿ ದೊಡ್ಡ ಬಜೆಟ್ ಸೀರಿಯಲ್ಗಳ ಟ್ರೆಂಡ್ ಶುರುವಾಗಿದೆ. ಈಗಾಗಲೇ ಆಟಿಸಂ ಸಮಸ್ಯೆಯ ಕುರಿತು ಹಲವಾರು ಸಿನಿಮಾಗಳು ಬಂದಿದೆ. ಇಂತಹದೇ ಕಥೆ ಒಳಗೊಂಡಿರುವ 'ಅರ್ಧಾಂಗಿ' ಎಂಬ ಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೇ.23 ರಿಂದ ಆರಂಭವಾಗುತ್ತಿದೆ. ಈ ಸೀರಿಯಲ್ ರಾಯಭಾರಿಯಾಗಿ ನಟಿ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಂಡಿದ್ದಾರೆ.
ಮಲ್ಲೇಶ್ವರಂನಲ್ಲಿರೋ ಅರುಣ ಚೇತನ ದಿವ್ಯಾಂಗ ಮಕ್ಕಳ ಶಾಲೆಯಲ್ಲಿ 'ಅರ್ಧಾಂಗಿ' ಸುದ್ದಿಗೋಷ್ಠಿ ಮಾಡಲಾಗಿದ್ದು, ಈ ಸೀರಿಯಲ್ ರಾಯಭಾರಿಯಾಗಿರೋ ಪ್ರಿಯಾಂಕಾ ಉಪೇಂದ್ರ, ಯುವ ನಟ ಪೃಥ್ವಿ ಶೆಟ್ಟಿ, ನಟಿ ಅಂಜನಾ ದೇಶಪಾಂಡೆ, ನಿರ್ದೇಶಕ ಎಂ. ಕುಮಾರ್ ಹಾಗು ನಿರ್ಮಾಪಕ ಶ್ರೀನಾಥ್ ರಘುನಾಮ್ ಸೇರಿದಂತೆ ಇಡೀ ತಂಡ ಹಾಜರಿತ್ತು.
ಮೊದಲಿಗೆ ಮಾತು ಶುರು ಮಾಡಿದ ಪ್ರಿಯಾಂಕಾ ಉಪೇಂದ್ರ, ಈ ಅರ್ಧಾಂಗಿಯ ಪ್ರೋಮೋ ಶೂಟ್ ಮಾಡಿದ್ವಿ, ಒಳ್ಳೆಯ ಅನುಭವ. ಧಾರಾವಾಹಿ ಮೂಲಕ ಒಂದು ಸಮಸ್ಯೆಯ ಬಗ್ಗೆ ಹೇಳಲು ಹೊರಟಿದ್ದಾರೆ. ನಾನು ಕೂಡ ಬಂಗಾಳಿ ಸೀರಿಯಲ್ನಲ್ಲಿ ನಟಿಸಿದ್ದೆ, ನಿಜವಾಗ್ಲೂ ಕಿರುತೆರೆ ಪ್ರೇಕ್ಷಕರಿಗೆ ಧಾರಾವಾಹಿ ಮನರಂಜನೆ ನೀಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅರ್ಧಾಂಗಿ ಧಾರಾವಾಹಿ ಸುದ್ದಿಗೋಷ್ಠಿ ನಂತರ ಮಾತನಾಡಿದ ನಿರ್ದೇಶಕ ಎಂ.ಕುಮಾರ್, ಒಬ್ಬ ಆಟಿಸಂ ಸಮಸ್ಯೆ ಇರುವ ಹುಡುಗನನ್ನ ಮದುವೆಯಾದ ಮೇಲೆ ಆತನ ಪತ್ನಿ ಏನೆಲ್ಲಾ ಸವಾಲುಗಳನ್ನ ಎದುರಿಸುತ್ತಾಳೆ ಎನ್ನುವುದು 'ಅರ್ಧಾಂಗಿ' ಸೀರಿಯಲ್ ಕಥೆ ಎಂದರು.
ಅರುಣ ಚೇತನ ದಿವ್ಯಾಂಗ ಮಕ್ಕಳ ಶಾಲೆ ಪ್ರಾಂಶುಪಾಲರಾದ ಗಾಯಿತ್ರಿ ಪಂಜು ಮಾತನಾಡಿ, ನಾವು ಕಳೆದ 37ವರ್ಷದಿಂದ ಆಟಿಸಂ, ಬುದ್ಧಿಮಾಂದ್ಯ ಹಾಗು ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇವೆ. ಈ ಸೀರಿಯಲ್ನಲ್ಲಿ ಹೆಚ್ಚಾಗಿ ಆಟಿಸಂ ಸಮಸ್ಯೆಗೆ ಒಳಗಾದವರು ಹೇಗೆ ರಿಯಾಕ್ಟ್ ಮಾಡ್ತಾರೆ ಎಂಬುದನ್ನು ತೋರಿಸಬೇಕು, ಹಾಗೇ ನಮ್ಮ ಅರುಣ ಚೇತನ ಸಂಸ್ಥೆಗೆ ಆರ್ಥಿಕ ಸಹಾಯದ ಅವಶ್ಯಕತೆ ಇದೆ ಅಂತಾ ಹೇಳಿದರು.
ಯುವ ಪ್ರತಿಭೆ ಪೃಥ್ವಿ ಶೆಟ್ಟಿ ಆಟಿಸಂ ಸಮಸ್ಯೆ ಎದುರಿಸುವ ಮುಗ್ಧ ಹುಡುಗನ ಪಾತ್ರ ಮಾಡುತ್ತಿದ್ದಾರೆ. ನಾಯಕಿಯಾಗಿ ಅಂಜನಾ ದೇಶಪಾಂಡೆ ಕಾಣಿಸಿಕೊಂಡಿದ್ದು, ಆರು ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ. ಜೊತೆಗೆ ಮಂಡ್ಯ ರವಿ, ಪದ್ಮನಿ, ಪ್ರಕಾಶ್, ನೀತು ಸೇರಿದಂತೆ 'ಅರ್ಧಾಂಗಿ' ಧಾರಾವಾಹಿಯಲ್ಲಿ ದೊಡ್ಡ ತಾರಾಗಣವೇ ಇದೆ. ಸುಖ ದುಃಖದ ಕಥೆ ಆಧರಿಸಿರೋ ಈ ಧಾರಾವಾಹಿ ಇದೇ ಮೇ 23 ರಿಂದ ಸಂಜೆ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಇದನ್ನೂ ಓದಿ:ಸಿನಿಮಾ ರಂಗದಲ್ಲಿ ಯುವ ನಟಿಯರ ಸರಣಿ ಸಾವುಗಳು: ತೆರೆಮರೆಗೆ ಸರಿದ ಮತ್ತೊಬ್ಬ ಯುವ ನಟಿ