ಕನ್ನಡ ಚಿತ್ರರಂಗದಲ್ಲಿ ಯುವ ನಟರು ನಟನೆ ಜತೆಗೆ ನಿರ್ದೇಶಕರಾಗುವ ಒಲವು ಹೆಚ್ಚಾಗುತ್ತಿದೆ. ಈಗಾಗಲೇ ದುನಿಯಾ ವಿಜಯ್, ಡಾರ್ಲಿಂಗ್ ಕೃಷ್ಣ, ಸೂರಜ್ ಗೌಡ ಸೇರಿದಂತೆ ಸಾಕಷ್ಟು ನಟರು ನಿರ್ದೇಶಕರಾಗಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಇದೇ ಸಾಲಿಗೆ ಕೆಂಡ ಸಂಪಿಗೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದು, ಕಾಲೇಜು ಕುಮಾರನಾಗಿ ಮಿಂಚಿರುವ ವಿಕ್ಕಿ ವರುಣ್ ಅಭಿನಯದ ಜತೆಗೆ ನಿರ್ದೇಶಕನ ಪಟ್ಟ ಅಲಂಕರಿಸಿದ್ದಾರೆ.
'ಕಾಲಾಪತ್ಥರ್' ಸಿನಿಮಾದಲ್ಲಿ ವಿಕ್ಕಿ ವರಣ್ ಅಭಿನಯದ ಜತೆಗೆ, ನಿರ್ದೇಶಕನಾಗಿ ಚೊಚ್ಚಲ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಫಸ್ಟ್ ಲುಕ್ನಲ್ಲಿಯೇ 'ಕಾಲಾಪತ್ಥರ್' ಸಿನಿಮಾ ಗಮನ ಸೆಳೆದಿತ್ತು. ನಿರ್ದೇಶಕರಾದ ಸೂರಿ ಹಾಗೂ ಯೋಗರಾಜ್ ಭಟ್ ಕೈ ಕೆಳಗೆ ಪಳಗಿದ ಪ್ರತಿಭೆ ವಿಕ್ಕಿ ವರುಣ್. ನಿರ್ದೇಶಕನಾಗಲು ಬಂದ ವಿಕ್ಕಿ ನಟನಾಗಿ ಎರಡು ಚಿತ್ರ ಮಾಡಿ ಗೆದ್ದು, ಈಗ ಮೂರನೇ ಚಿತ್ರಕ್ಕೆ ನಟನೆಯ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಅರ್ಪಿಸುವ, ಭುವನ್ ಮೂವೀಸ್ ನಿರ್ಮಾಣದ, ಕೆಂಡಸಂಪಿಗೆ, ಕಾಲೇಜ್ ಕುಮಾರ ಖ್ಯಾತಿಯ ವಿಕ್ಕಿ ವರುಣ್ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶಿಸಿರುವ ಚೊಚ್ಚಲ ಚಿತ್ರ ಕಾಲಾಪತ್ಥರ್. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ನಾಯಕಿಯಾಗಿ ಧನ್ಯ ರಾಮ್ ಕುಮಾರ್ ಅಭಿನಯಿಸಿದ್ದು, ಧನ್ಯ ಪಾತ್ರದ ಫಸ್ಟ್ ಲುಕ್‌ನ ವರನಟ ಡಾ.ರಾಜ್ಕುಮಾರ್ ಜನ್ಮ ದಿನದಂದು (ಏಪ್ರಿಲ್ 24) ಬಿಡುಗಡೆಯಾಗಲಿದೆ.