ಲಕ್ಷ್ಮಣ್ ಉಟೇಕರ್ ನಿರ್ದೇಶನದ, ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಮುಂಬರುವ ರೊಮ್ಯಾಂಟಿಕ್ ಕಾಮಿಡಿ ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಲಕ್ಷ್ಮಣ್ ಉಟೇಕರ್ ಅವರು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ (ದಂಪತಿ) ಅವರನ್ನು ಜೊತೆಯಾಗಿ ಏಕೆ ತೆರೆ ಮೇಲೆ ತರುವ ಪ್ರಯತ್ನ ಮಾಡಲಿಲ್ಲ ಎಂಬ ಬಗ್ಗೆ ಹಂಚಿಕೊಂಡಿದ್ದಾರೆ. ಕತ್ರಿನಾ ಕೈಫ್ ಅವರು ಮಧ್ಯಮ ವರ್ಗದ, ಅವಿಭಕ್ತ ಕುಟುಂಬದ ಸೊಸೆ ಪಾತ್ರವನ್ನು ಚಿತ್ರಿಸಬಹುದು ಎಂದು ನನಗನಿಸಲಿಲ್ಲ ಎಂದು ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಲಕ್ಷ್ಮಣ್ ಉಟೇಕರ್, ಕತ್ರಿನಾ ಅವರು ನನ್ನ ಭಾಷೆಯನ್ನು ಅರ್ಥ ಮಾಡಿಕೊಂಡರೆ ಮಾತ್ರ ನಾನು ಅವರಿಗೆ ನಿರ್ದೇಶನ ಮಾಡಲು ಸಾಧ್ಯವಾಗುತ್ತದೆ. ಕತ್ರಿನಾ ಅವರು ಎಂದಾದರೂ ಸಣ್ಣ ಪಟ್ಟಣದ ನಾಯಕಿಯಂತೆ ಕಾಣಿಸಿದ್ದಾರಾ? ನಿಮಗನಿಸುತ್ತದೆಯೇ? ಎಂದು ತಿಳಿಸಿದರು. ಅಲ್ಲದೇ ನಮಗೆ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ವಿಕ್ಕಿ ಮತ್ತು ಕತ್ರಿನಾ ಅವರೊಂದಿಗೆ ಕೆಲಸ ಮಾಡಲು ನಾನು ಇಷ್ಟಪಡುತ್ತೇನೆ ಎಂದು ಕೂಡ ಹೇಳಿದರು.
"ಈ ಬಾರಿ ನಾನು ಅವರಿಬ್ಬರನ್ನು ತೆರೆ ಮೇಲೆ ಒಟ್ಟಾಗಿ ತರಲು ಸಾಧ್ಯವಾಗಲಿಲ್ಲ. ಏಕೆಂದರೆ, 'ಜರಾ ಹಟ್ಕೆ ಜರಾ ಬಚ್ಕೆ' ಒಂದು ವಿಭಿನ್ನ ಸಿನಿಮಾ. ಕತ್ರಿನಾ ಅವರ ಲುಕ್ ಪ್ರಕಾರ, ಮಧ್ಯಮ ವರ್ಗದ, ಅವಿಭಕ್ತ ಕುಟುಂಬದ ಸೊಸೆಯ ಪಾತ್ರಕ್ಕೆ ಸರಿಹೊಂದುತ್ತಾರೆ ಎಂದು ನನಗೆ ಅನಿಸಲಿಲ್ಲ. ಭವಿಷ್ಯದಲ್ಲಿ ಅವರಿಬ್ಬರಿಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕರೆ, ಆಗ ಏಕೆ ಮಾಡಬಾರದು?. ನಾನು ಅವರಿಬ್ಬರಿಗೆ ನಿರ್ದೇಶನ ಮಾಡಲು ಸಿದ್ಧ, ಸೂಕ್ತ ಸ್ಕ್ರಿಪ್ಟ್ ಬೇಕು" ಎಂದು ತಿಳಿಸಿದರು.