ಮಂಡ್ಯ:ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಅಪಘಾತ ಸರಣಿ ಮುಂದುವರೆದಿದೆ. ಇಂದು ಮುಂಜಾನೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಯುವ ನಟ ಲೋಕೇಶ್ (38) ಸಾವನ್ನಪ್ಪಿದ್ದಾರೆ. ಮಂಡ್ಯ ತಾಲೂಕಿನ ಹುಲಿಯೂರು ಬಳಿ ಈ ಘಟನೆ ಸಂಭವಿಸಿದೆ.
ಲೋಕೇಶ್ ಅವರು ಬೆಂಗಳೂರಿನಿಂದ ಮೈಸೂರಿನ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಪಾರ್ಕ್ ಮಾಡಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್ ಸಹ ದೊರಕಿದೆ. ಆದರೆ, ಕಾರು ನಾಪತ್ತೆಯಾಗಿದ್ದು, ಅದರ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.
ಮೃತ ಲೋಕೇಶ್ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೊಡ್ಡತುಪ್ಪೂರು ಗ್ರಾಮದವರು. ಇವರಿಗೆ ಸಿನಿಮಾ ಕ್ಷೇತ್ರದ ಮೇಲೆ ಬಹಳ ಒಲವಿತ್ತು. ಈ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ತುಡತವಿತ್ತು. ಆದರೆ ವಿಧಿಯಾಟ ಇದಕ್ಕೆ ಅವಕಾಶ ನೀಡದೇ, ಅವರಿಂದು ಭೀಕರ ಅಪಘಾತದಲ್ಲಿ ಅಸುನೀಗಿದ್ದಾರೆ.
ಫ್ಯಾಮಿಲಿ ಪ್ಯಾಕ್ ಚಿತ್ರದಲ್ಲಿ ನಟನೆ: ಲೋಕೇಶ್ ಅವರು ಕೆಲ ಕಿರುಚಿತ್ರಗಳಲ್ಲಿ ನಟಿಸಿದ್ದರು. ಹಲವು ಕಲಾ ನಿರ್ದೇಶಕರ ಜೊತೆ ಕೆಲಸ ಮಾಡಿದ್ದರು. ಫ್ಯಾಮಿಲಿ ಪ್ಯಾಕ್ ಚಲನಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೇ ಹೊಸಬೈಕ್ ಖರೀದಿ ಮಾಡಿದ್ದ ಲೋಕೇಶ್, ಶುಕ್ರವಾರ ಸಂಜೆ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದರು. ಆದರೆ, ಅದೇ ಬೈಕ್ನಲ್ಲಿ ಇಂದು ಅವರ ಪ್ರಾಣ ಹೋಗಿರುವುದು ದುರಂತವೇ ಸರಿ. ಶುಕ್ರವಾರ ತಡರಾತ್ರಿ ಊರಿಗೆ ಹೊರಟ್ಟಿದ್ದು, ಮುಂಜಾನೆ ವೇಳೆ ಮಂಡ್ಯದ ಬಳಿ ಅಪಘಾತವಾಗಿದೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ:ಮೈಸೂರು: ಕಾರು ಅಪಘಾತ ಸ್ಥಳದಲ್ಲಿ ವಿದ್ಯುತ್ ತಂತಿ ಸ್ಪರ್ಶ; ಇಬ್ಬರು ಸಾವು, ಮೂವರಿಗೆ ಗಾಯ
ಸಿಎಂ ಸಿದ್ದರಾಮಯ್ಯ ಪರಿಶೀಲನೆ: ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಉದ್ಘಾಟನೆ ಆದ ಬಳಿಕ ಕೆಲವೇ ತಿಂಗಳಲ್ಲಿ ನೂರಕ್ಕೂ ಹೆಚ್ಚು ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಳೆದ ಮಾರ್ಚ್ ತಿಂಗಳಿನಿಂದ ಜೂನ್ ವರೆಗೆ ಒಟ್ಟು 303 ಅಪಘಾತಗಳು ಸಂಭವಿಸಿದೆ. 100 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇತ್ತೀಚೆಗೆ ಅಧಿಕಾರಿಗಳು ತಿಳಿಸಿದ್ದರು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇಂದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ 158.81 ಕೋಟಿ ರೂ.ಗಳ ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿ ಕೈಗೊಳ್ಳಲಾಗುವುದು. ನವೆಂಬರ್ ತಿಂಗಳ ನಂತರ ಈ ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ 158.81 ಕೋಟಿ ವೆಚ್ಚದ ಹೆಚ್ಚುವರಿ ಕಾಮಗಾರಿ: ಸಿಎಂ