ಹೈದರಾಬಾದ್: ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಮೂರನೇ ಕುಡಿ ಇದೀಗ ಬಾಲಿವುಡ್ ಪ್ರವೇಶಕ್ಕೆ ಸಜ್ಜಾಗಿದೆ. ಮೊಮ್ಮಗ ಅಗಸ್ತ್ಯ ಸೇರಿದಂತೆ ಬಾಲಿವುಡ್ ಪ್ರಖ್ಯಾತ ನಟ - ನಟಿಯರ ಮಕ್ಕಳು ನಟಿಸಿರುವ ವೆಬ್ ಸಿರೀಸ್ 'ದಿ ಆರ್ಚೀಸ್'ನ ಟ್ರೈಲರ್ ಬಿಡುಗಡೆ ಆಗಿದೆ. ಜೋಯಾ ಅಖ್ತರ್ ನಿರ್ದೇಶದನ ಈ ಚಿತ್ರದಲ್ಲಿ ನಟ ಶಾರುಖ್ ಖಾನ್ ಮಗಳು ಸುಹಾನಾ ಖಾನ್, ಶ್ರೀದೇವಿ ಎರಡನೇ ಮಗಳು ಖುಷಿ ಕಪೂರ್ ಸೇರಿದಂತೆ ವೆದಾಂಗ್ ರೈನಾ, ಮಿಹಿರಾ ಅಹುಜಾ, ಯುವರಾಜ್ ಮೆಂಡಾ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ವೆಬ್ ಸಿರೀಸ್ ಸೆಟ್ ಏರುವ ಮುನ್ನವೇ ಸಾಕಷ್ಟು ಸದ್ದು ಮಾಡಿದ್ದು, ಇದೀಗ ಟ್ರೈಲರ್ಗೆ ಅಭಿಮಾನಿಗಳು ಸಕಾರಾತ್ಮಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಮೊಮ್ಮಗನ ನಟನೆಯ ಮೊದಲ ಪ್ರಯತ್ನವನ್ನು ಪ್ರಶಂಸಿಸುವಲ್ಲಿ ನಟ ಅಮಿತಾಬ್ ಬಚ್ಚನ್ ಕೂಡ ಹಿಂದೆ ಬಿದ್ದಿಲ್ಲ. ಮೊಮ್ಮಗನ ಅಭಿನಯಕ್ಕೆ ಮನಸಾರೆ ಮೆಚ್ಚಿ, ಸಾಮಾಜಿಕ ಜಾಲತಾಣದಲ್ಲಿ ಹೊಗಳಿಕೆ ಮಳೆ ಸುರಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ 'ದಿ ಅರ್ಚೀಸ್'ನ ಟ್ರೈಲರ್ ಹಂಚಿಕೊಂಡಿರುವ ಅವರು, ನನ್ನ ಪ್ರೀತಿ ಪಾತ್ರ ಅಗಸ್ತ್ಯ ಇದೇ ರೀತಿ ಆಶೀರ್ವಾದಗಳನ್ನು ಪಡೆಯುವಂತೆ ಮುಂದುವರಿ. ನಿನ್ನ ಸಾಮರ್ಥ್ಯದಿಂದ ಎಲ್ಲವೂ ಬೆಳಗಲು ಸಾಧ್ಯವಾಗಲಿದೆ ಎಂದು ಅಡಿಬರಹ ಬರೆದಿದ್ದಾರೆ.
ಇದೇ ವೇಳೆ ಅಳಿಯನನ್ನು ಹಾಡಿ ಹೋಗಲು ನಟ ಅಭಿಷೇಕ್ ಕೂಡ ಮರೆತಿಲ್ಲ. ಚಿತ್ರ ವೀಕ್ಷಣೆಗೆ ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿರುವ ನಟ, ಇದೊಂದು ಅದ್ಭುತ. ನೋಡಲು ಕಾಯುತ್ತಿದ್ದೇನೆ ಅಗಸ್ತ್ಯ. ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ. ನೀವು ಸಣ್ಣವನಿದ್ದಾಗ ನನ್ನ ಹಾಸಿಗೆ ಮೇಲೆ ಹಾರುತ್ತಿದ್ದೆ, ಗಾಳಿಯಲ್ಲಿ ಗಿಟಾರ್ ಬಾರಿಸುತ್ತಿದ್ದೆ. ಇದೀಗ ಸ್ಕ್ರೀನ್ ಮೇಲೆ ನಿಜವಾದ ಗೀಟಾರ್ನೊಂದಿಗೆ ಹಾರುವುದನ್ನು ಕಂಡು ಖುಷಿಯಾಗಿದೆ. ನಿಮ್ಮ ಪಯಣ ಈಗಷ್ಟೇ ಆರಂಭವಾಗಿದೆ. ಚೆನ್ನಾಗಿ ಕೆಲಸ ಮಾಡು. ನೀವು ಅದ್ಬುತ ಪ್ರದರ್ಶನವನ್ನು ತೋರಿದ್ದೀಯಾ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಇತರ ಸಹ ಕಲಾವಿದರು ಮತ್ತು ಸಿಬ್ಬಂದಿ ಕಾರ್ಯವನ್ನು ಹೊಗಳಿದ್ದು, ಶುಭ ಕೋರಿದ್ದಾರೆ.