'ದುನಿಯಾ' ಸಿನಿಮಾದಲ್ಲಿ ಖಳನಟನಾಗಿ ಬೆಳ್ಳಿ ತೆರೆಗೆ ಬಂದಿದ್ದ ಲೂಸ್ ಮಾದ ಯೋಗಿ ತಮ್ಮ ಐವತ್ತನೇ ಚಿತ್ರವನ್ನು ಘೋಷಿಸಿದ್ದಾರೆ. ನಂದಾ ಲವ್ಸ್ ನಂದಿತಾ ಸಿನಿಮಾದೊಂದಿಗೆ ನಾಯಕ ನಟನಾಗಿ ನಟಿಸಲು ಶುರುಮಾಡಿದ ಯೋಗಿ ಈವರೆಗೆ 49 ಚಿತ್ರಗಳನ್ನು ಮಾಡಿದ್ದಾರೆ. ಇದೀಗ ಅರ್ಧ ಶತಕದ ಹೊಸ್ತಿಲು ತಲುಪಿದ ಖುಷಿಯಲ್ಲಿದ್ದಾರೆ.
ಚಿತ್ರದ ಶೀರ್ಷಿಕೆ ಅನಾವರಣ ಮತ್ತು ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ನೆರವೇರಿದೆ. ನಟ ಡಾಲಿ ಧನಂಜಯ್ ಅವರು ಯೋಗಿ ಅವರ ಹೊಸ ಸಿನಿಮಾ 'ರೋಜಿ' ಶೀರ್ಷಿಕೆ ಅನಾವರಣಗೊಳಿಸಿ ಮೊದಲ ಸನ್ನಿವೇಶಕ್ಕೆ ಕ್ಲ್ಯಾಪ್ ಮಾಡಿದರು. 'ಹೆಡ್ ಬುಷ್' ಚಿತ್ರದ ನಂತರ ಶೂನ್ಯ ಎಂಬವರು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಡಿ.ವೈ.ರಾಜೇಶ್ ಮತ್ತು ಡಿ.ವೈ.ವಿನೋದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಯೋಗಿ ಅಭಿನಯದ 50ನೇ ಸಿನಿಮಾದ ಶೀರ್ಷಿಕೆ ಬಿಡುಗಡೆಗೊಳಿಸಿದ ಡಾಲಿ ಧನಂಜಯ್ ಡಾಲಿ ಧನಂಜಯ್ ಮಾತನಾಡಿ, "ಯೋಗಿ ನನ್ನ ಆತ್ಮೀಯ ಗೆಳೆಯ. 'ರೋಜಿ' ಯೋಗಿ ಅಭಿನಯದ 50 ನೇ ಸಿನಿಮಾ ಎಂದು ತಿಳಿದು ಸಂತೋಷವಾಯಿತು. ಶೂನ್ಯ ಕೂಡ ನಮ್ಮ ಸಂಸ್ಥೆಯ ನಿರ್ಮಾಣದ 'ಹೆಡ್ ಬುಷ್' ಚಿತ್ರ ನಿರ್ದೇಶಿಸಿದ್ದರು. ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ" ಎಂದು ಶುಭ ಹಾರೈಸಿದರು.
"ಇದು ನನ್ನ ಐವತ್ತನೇ ಸಿನಿಮಾ. ಚಿತ್ರದಲ್ಲಿ ಗ್ಯಾಂಗ್ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ಇದರಲ್ಲಿ ಸಿಕ್ಕಿರುವ ಪಾತ್ರ ವಿಭಿನ್ನ ಎನ್ನಬಹುದು. ಶೂನ್ಯ ಅವರು ಕಥೆ ಚೆನ್ನಾಗಿ ಮಾಡಿದ್ದಾರೆ. ಶೀರ್ಷಿಕೆ ಬಿಡುಗಡೆ ಮಾಡಿ, ಶುಭ ಹಾರೈಸಿದ ನನ್ನ ನಲ್ಮೆಯ ಸ್ನೇಹಿತ ಡಾಲಿ ಧನಂಜಯ್ ಅವರಿಗೆ ಧನ್ಯವಾದಗಳು" ಎಂದು ಲೂಸ್ ಮಾದ ಯೋಗಿ ತಿಳಿಸಿದರು.
ಇದನ್ನೂ ಓದಿ:ವೀಕೆಂಡ್ ವಿತ್ ರಮೇಶ್.. ಸಾಧಕರ ಸೀಟ್ಗೆ ಮತ್ತಷ್ಟು ಮೆರುಗು ತಂದುಕೊಟ್ಟ ಡಾ. ಮಂಜುನಾಥ್
ನಿರ್ದೇಶಕ ಶೂನ್ಯ ಮಾತನಾಡಿ, "ನನ್ನ ಮೊದಲ ನಿರ್ದೇಶನದ ಹೆಡ್ ಬುಷ್ ಚಿತ್ರಕ್ಕೆ ಎಲ್ಲರೂ ನೀಡಿದ್ದ ಪ್ರೋತ್ಸಾಹಕ್ಕೆ ನಾನು ಚಿರಋಣಿ. ಈಗ ನನ್ನ ನಿರ್ದೇಶನದ ಎರಡನೇ ಚಿತ್ರ 'ರೋಜಿ' ಗೆ ಚಾಲನೆ ಸಿಕ್ಕಿದೆ. ಚಿತ್ರದಲ್ಲಿ ಯೋಗಿ ಅವರ ಹೆಸರೇ 'ರೋಜಿ' ಅಂತಿದೆ. ಚಿತ್ರ ರಂಗದವರಿಗೆ ಚಿತ್ರಮಂದಿರ ದೇವಸ್ಥಾನವಿದಂತೆ. ಹಾಗಾಗಿ ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಆರಂಭಿಸಿದ್ದೇವೆ. ಮೇ ತಿಂಗಳಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ" ಎಂದು ಹೇಳಿದರು. ಬಳಿಕ ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದರು.
ಇದನ್ನೂ ಓದಿ:ಮಹೇಶ್ ಬಾಬು ಕಿಲ್ಲಿಂಗ್ ಲುಕ್ಗೆ ಹೆಂಡತಿ ನಮ್ರತಾ ಕಮೆಂಟ್; 'ಟಾಲಿವುಡ್ನ ಗ್ರೀಕ್ ದೇವತೆ' ಎಂದ ಅಭಿಮಾನಿ