ಕರ್ನಾಟಕದಲ್ಲಿ ಈ ಬಾರಿ ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಎಂಬ ಪ್ರಶ್ನೆಗೆ ಉತ್ತರ ಸಿಗಲು ಇನ್ನು ಒಂದು ದಿನ ಬಾಕಿ ಇದೆ. ಈ ಮಧ್ಯೆ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಿರ್ದೇಶಕ ಯೋಗರಾಜ್ ಭಟ್ ಈ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಸಾಮಾನ್ಯವಾಗಿ ಅವರು ರಾಜಕೀಯದ ಬಗ್ಗೆ ಯಾವತ್ತೂ ಮಾತಾಡೋದಿಲ್ಲ.
ಎಲ್ಲ ರಾಜಕೀಯ ಮುಖಂಡರೊಂದಿಗೂ ಚೆನ್ನಾಗಿರೋ ಭಟ್ರು ರಾಜಕೀಯ ಪಕ್ಷಗಳ ಬಗ್ಗೆ ಈವರೆಗೂ ನೇರವಾಗಿ ಮಾಡಿದ್ದೇ ಇಲ್ಲ. ಆದರೆ ಇದೇ ಮೊದಲ ಬಾರಿಗೆ ಯೋಗರಾಜ್ ಭಟ್ ಫ್ಯಾಮಿಲಿ ಜೊತೆ ಮತ ಚಲಾಯಿಸಿ ಹೊಸ ಅವತಾರದಲ್ಲಿ ಪತ್ನಿ ಹಾಗೂ ಮಗಳೊಂದಿಗೆ ರಾಜಕೀಯ ಲೆಕ್ಕಾಚಾರ ವಿಶ್ಲೇಷಣೆ ಮಾಡಿದ್ದಾರೆ. ಮೀಸೆ ತೆಗೆದು ಹೊಸ ಅವತಾರದಲ್ಲಿ ಭಟ್ರು ಪ್ರತ್ಯಕ್ಷ ಆಗಿದ್ದಾರೆ. ಈ ಬಾರಿ ಯಾವ ಪಕ್ಷ ಗೆಲ್ಲಬಹುದು ಅನ್ನೋ ಪತ್ನಿಯ ಪ್ರಶ್ನೆಗೆ ತಮ್ಮದೇ ಟಿಪಿಕಲ್ ಸ್ಟೈಲ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.
ಯೋಗರಾಜ್ ಭಟ್‌ಗೆ ಪತ್ನಿ ಕೇಳಿದ ಪ್ರಶ್ನೆಗಳಿವು..:ನೀವು ಯಾವ ಪಾರ್ಟಿ ಪರ ಅಂತ ಕೇಳಬಹುದಾ? ಯಾವ ಸೈಡ್ ನೀವು? ಎಂದು ನೇರವಾಗಿಯೇ ಗಂಡನಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಭಟ್ರು, "ನಮ್ಮನ್ನು ಸಿನಿಮಾ ನಿರ್ದೇಶಕರು, ದಿಗ್ಗಜರು ಅಂತ ಕರೀತಾರೆ. ಟಾಪು, ಬಾಟಮ್ಮು, ಫ್ರಂಟು, ಬ್ಯಾಕು, ಎಡ, ಬಲ ಎಲ್ಲ ಒಂದೇ ತರ ಅಂತ ಅಂದುಕೊಳ್ಳಬಹುದು. ಎಲ್ಲ ದಿಕ್ಕಿಗೂ ಸಮಾನ ರೆಸ್ಪೆಕ್ಟ್ ಕೊಡಬೇಕು. ಮನುಷ್ಯತ್ವ ಮುಖ್ಯ. ಮನುಷ್ಯನ ದಿಕ್ಕು ತಗೊಂಡು ಏನು ಮಾಡೋಣ? ನಾನು ಅಥವಾ ನಮ್ಮಂತಹವರು ನಿರ್ಲಿಪ್ತ, ನಿರ್ವಿಘ್ನ ನಾಗರೀಕರು" ಎಂದು ಒಗಟಾಗಿ ಉತ್ತರಿಸಿದರು.
ಸಿನಿಮಾದವರೆಲ್ಲ ಅಲ್ಲಿ ಇಲ್ಲಿ ಪ್ರಚಾರಕ್ಕೆ ಹೋಗ್ತಿದ್ರೆ, ತಾವು ಹೋಗಿಲ್ವೇನು? ಎಂದು ಪತ್ನಿ ಕೇಳಿದ್ದಾರೆ. ಇದಕ್ಕೆ ಭಟ್ರು, "ಅದು ಅವರವರ ಆಸೆ, ಅವರವರ ಆಯ್ಕೆ. ತಪ್ಪು ಸರಿ ಚರ್ಚೆ ಮಾಡುವುದಕ್ಕೆ ಹೋಗಬಾರದು. ಕಾಸು ಖುಷಿ ಕೆಡಿಸಿತು, ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅಂತ ಒಂದು ಗಾದೆ ಇದೆ" ಎಂದು ಪಂಚ್ ಉತ್ತರ ಕೊಟ್ಟರು.