ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ 'ಕೌರವ' ಖ್ಯಾತಿಯ ಬಿ.ಸಿ ಪಾಟೀಲ್ ಹಾಗೂ ಸೂರ್ಯ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಗರಡಿ'. ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ವಿಚಾರವಾಗಿ ಟಾಕ್ ಆಗುತ್ತಿದೆ. ಇದೀಗ ಚಿತ್ರತಂಡದೊಂದಿಗೆ ನಟ ಚಿಕ್ಕಣ್ಣ ಕೂಡ ಸೇರಿಕೊಂಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಅವರು ಗರಡಿ ಸಿನಿಮಾಕ್ಕಾಗಿ ಆ್ಯಂಕರ್ ಆಗಿದ್ದಾರೆ. ಸದ್ಯ ಗರಡಿ ಚಿತ್ರದ ಪ್ರಮೋಷನ್ ವಿಡಿಯೋದಲ್ಲಿ ಸುದ್ದಿ ನಿರೂಪಕರಾಗಿ ಚಿಕ್ಕಣ್ಣ ಗಮನ ಸೆಳೆದಿದ್ದು, ವಿಡಿಯೋಗಳು ವೈರಲ್ ಆಗುತ್ತಿವೆ.
ನಮ್ಮ ದೇಶಿ ಕುಸ್ತಿಯ ಬಗ್ಗೆ ಕಥೆಯನ್ನು ಒಳಗೊಂಡಿರುವ ಗರಡಿ ಚಿತ್ರದ ವಿಶೇಷತೆಗಳ ಬಗ್ಗೆ ನಟ ಚಿಕ್ಕಣ್ಣ ತಮ್ಮ ನಿರೂಪಣೆ ಶೈಲಿಯಿಂದ ಗಮನ ಸೆಳೆದಿದ್ದಾರೆ. ಇದೇ ನವೆಂಬರ್ 1ರಂದು ಗರಡಿ ಚಿತ್ರದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಇದರ ಜೊತೆಗೆ, ಗೆಳೆಯ ಸೂರ್ಯ ಈ ಚಿತ್ರಕ್ಕಾಗಿ ಕುಸ್ತಿ ಪಾತ್ರಕ್ಕೆ ಎಷ್ಟು ಸಿದ್ಧತೆ ಮಾಡಿಕೊಂಡಿದ್ದರು ಎಂದೆಲ್ಲಾ ತಮ್ಮದೇ ಶೈಲಿಯಲ್ಲಿ ಮಾತನಾಡಿದ್ದಾರೆ.
ಇನ್ನು, ಮಾಜಿ ಸಚಿವ ಬಿ ಸಿ ಪಾಟೀಲ್ಗೆ ಕೌರವ ಎಂಬ ಬಿರುದು ಯಾಕೆ ಬಂತು ಎಂಬುದನ್ನು ನಟ ಚಿಕ್ಕಣ್ಣ ತಮ್ಮದೇ ಮಾತುಗಳಲ್ಲಿ ಬ್ರೇಕಿಂಗ್ ನ್ಯೂಸ್ ರೀತಿ ಹೇಳಿದ್ದಾರೆ. ಬಿ ಸಿ ಪಾಟೀಲ್ ತಮ್ಮ ರಾಜಕೀಯ ಬಿಡುವು ಮಾಡಿಕೊಂಡು ಬಹಳ ಇಷ್ಟ ಪಟ್ಟು ಅಭಿನಯಿಸಿರುವ ಸಿನಿಮಾವಿದು. ಈ ಹಿನ್ನೆಲೆಯಲ್ಲಿ ಈ ಚಿತ್ರದ ಟ್ರೈಲರ್ ಕಾರ್ಯಕ್ರಮವನ್ನು ಬಿ ಸಿ ಪಾಟೀಲ್ ಅವರು ತಮ್ಮ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಮಾಡಲು ಸಿದ್ಧತೆ ನಡೆಸಿದ್ದಾರೆ.