ಬಾಲಿವುಡ್ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರ ಮುಂದಿನ ರಾಮಾಯಣ ಆಧಾರಿತ ಚಿತ್ರದಲ್ಲಿ ನಟ ರಣ್ಬೀರ್ ಕಪೂರ್ ಮತ್ತು ಅವರ ಪತ್ನಿ, ನಟಿ ಆಲಿಯಾ ಭಟ್ ರಾಮ-ಸೀತೆ ಪಾತ್ರದಲ್ಲಿ ಹಾಗೂ ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಈ ಆಫರ್ ಅನ್ನು ಯಶ್ ನಯವಾಗಿಯೇ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ನಟ ಈ ಯೋಜನೆಯಿಂದ ಹಿಂದೆ ಸರಿದಿರುವುದಾಗಿ ವರದಿಯಾಗಿದೆ.
ನಿತೇಶ್ ತಿವಾರಿವರು ಇತ್ತೀಚೆಗೆ ಬವಾಲ್ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಅವರು ರಾಮಾಯಣ ಆಧಾರಿತ ಸಿನಿಮಾ ಮಾಡುತ್ತಿರುವ ಮಾಹಿತಿ ಇದೆ. ಈ ವರ್ಷದ ದೀಪಾವಳಿಯ ಸಂದರ್ಭದಲ್ಲಿ ಈ ಸಿನಿಮಾವನ್ನು ಘೋಷಿಸಬಹುದು. ಚಿತ್ರದ ಅಧಿಕೃತ ಘೋಷಣೆಗೂ ಮುನ್ನವೇ ಅವರು ಯಶ್ಗೆ ರಾವಣನ ಪಾತ್ರಕ್ಕೆ ಆಫರ್ ನೀಡಿದ್ದಾರೆ. ಆದರೆ ಇದನ್ನು ಅಷ್ಟೇ ಸಲೀಸಾಗಿ ಕೆಜಿಎಫ್ ಸ್ಟಾರ್ ನಿರಾಕರಿಸಿದ್ದಾರೆ.
ಆದರೆ ಯಶ್ ಅವರು ರಾವಣನ ಪಾತ್ರವನ್ನು ಮಾಡಲು ನಿಜಕ್ಕೂ ಉತ್ಸುಕರಾಗಿದ್ದರು. ರಾಮನ ಪಾತ್ರ ಮಾಡುವುದಕ್ಕಿಂತ ರಾವಣನ ಪಾತ್ರ ನಿಜಕ್ಕೂ ಸವಾಲಿನ ಕೆಲಸ. ರಾಮನ ಪಾತ್ರವನ್ನು ರಣಬೀರ್ ಮಾಡುವುದರಿಂದ ರಾವಣನ ಪಾತ್ರವನ್ನು ಸ್ವೀಕರಿಸಲು ಯಶ್ ಒಮ್ಮೆ ಯೋಚಿಸಿದ್ದರು. ಆದರೆ ಅವರ ಆಪ್ತರು ಈ ಪಾತ್ರವನ್ನು ಒಪ್ಪಿಕೊಳ್ಳದಂತೆ ಯಶ್ಗೆ ಸಲಹೆ ನೀಡಿದ್ದಾರೆ.
ರಾವಣನ ಪಾತ್ರವು ಪ್ರಬಲವಾಗಿದ್ದರೂ ಅವರ ಅಭಿಮಾನಿಗಳು ಯಶ್ ಅವರನ್ನು ನಕಾರಾತ್ಮಕ ಪಾತ್ರದಲ್ಲಿ ನೋಡಲು ಇಷ್ಟಪಡುವುದಿಲ್ಲ. ಈ ಹಿಂದೆ ಸಂದರ್ಶನವೊಂದರಲ್ಲಿ ಯಶ್ ಈ ಮಾತನ್ನು ಉಚ್ಚರಿಸಿದ್ದರು. "ನನ್ನ ಅಭಿಮಾನಿಗಳ ಭಾವನೆಗಳ ಬಗ್ಗೆ ನಾನು ಜಾಗರೂಕನಾಗಿರಬೇಕು. ಅವರ ಇಚ್ಛೆಯ ವಿರುದ್ಧವಾಗಿ ನಾನು ನಡೆದುಕೊಳ್ಳುವುದಿಲ್ಲ" ಎಂದು ಹೇಳಿದ್ದರು. ಹೀಗಾಗಿ ಯಶ್ ರಾವಣನ ಪಾತ್ರವನ್ನು ಅಭಿಮಾನಿಗಳಿಗಾಗಿಯೇ ಬಿಟ್ಟುಕೊಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ಫ್ಯಾನ್ಸ್ಗೆ ನಟನ ಮೇಲಿದ್ದ ಪ್ರೀತಿ, ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದೆ.