ಕನ್ನಡ ಚಿತ್ರರಂಗದಲ್ಲಿ ಕ ಅಕ್ಷರ ಈಗ ಸಿನಿಮಾ ಟೈಟಲ್ ಆಗುವ ಟ್ರೆಂಡ್ ಹೆಚ್ಚಾಗುತ್ತಿದೆ. ನಿರ್ದೇಶಕ ಪ್ರೇಮ್ ಹಾಗು ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ KD ಸಿನಿಮಾ ಬರ್ತಾ ಇರೋದು ಗೊತ್ತಿರುವ ವಿಚಾರ. ಇದೀಗ KA15 ಹೆಸರಿನಲ್ಲಿ ಮತ್ತೊಂದು ಚಿತ್ರ ತಯಾರಾಗುತ್ತಿದೆ. ಹೊಸ ರೀತಿಯ ಸದಭಿರುಚಿಯ ಧರಣಿ ಮಂಡಲ ಮಧ್ಯದೊಳಗೆ ಚಿತ್ರ ಮಾಡಿದ ತಂಡ ಕ ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡು ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ವಿಜಯನಗರದ ಶ್ರೀ ವರಸಿದ್ಧಿ ವಿನಾಯಕ ಮತ್ತು ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಶೀರ್ಷಿಕೆ ಅನಾವರಣದ ಮಾಡಿದೆ.
ಈಗಾಗಲೇ ವಿಭಿನ್ನ ಪಾತ್ರಗಳ ಮೂಲಕ ತನ್ನದೇ ಬೇಡಿಕೆ ಹೊಂದಿರುವ ಯಶ್ ಶೆಟ್ಟಿ ಹಾಗೂ ಯುವ ನಟ ಸಿದ್ದು ಮೂಲಿಮನಿ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಯಶ್ ಶೆಟ್ಟಿ ಈಗಾಗಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹಾಗೆಯೇ ಸಿದ್ದು ಮೂಲಿಮನಿ ಕೂಡ ತಮ್ಮ ಅಭಿನಯ ಚತುರತೆಯನ್ನು ಪ್ರೇಕ್ಷಕರ ಮುಂದಿಟ್ಟು ತಾನೊಬ್ಬ ಒಳ್ಳೆಯ ಕಲಾವಿದ ಎನ್ನುವುದನ್ನು ನಿರೂಪಿಸಿದ್ದಾರೆ.