ಇಂದಿನಿಂದ ಪ್ರಾರಂಭವಾದ ಐದು ದಿನಗಳ ಏರ್‌ಶೋ 2023 ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ ಸ್ಯಾಂಡಲ್ವುಡ್ನ ಖ್ಯಾತ ನಟ-ನಟಿಯರನ್ನು ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಸಂಸದ ಪಿಸಿ ಮೋಹನ್ ಅವರು ನಟ ಯಶ್ ಮತ್ತು ಪ್ರಧಾನಿ ಮೋದಿ ಕಾಣಿಸಿಕೊಂಡಿರುವ ಫೋಟೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ 'ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜೀ ಅವರು ರಾಕಿಂಗ್ ಸ್ಟಾರ್ ಯಶ್ ಮತ್ತು ಇತರ ಕಲಾವಿದರನ್ನು ಬೆಂಗಳೂರಿನಲ್ಲಿ ಭೇಟಿಯಾದರು' ಎಂದು ಅವರ ಫೋಟೋಗಳಿಗೆ ಶೀರ್ಷಿಕೆ ಕೂಡ ಹಾಕಿದ್ದಾರೆ. ಸದ್ಯ ಸೆಲೆಬ್ರಿಟಿಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಯಶ್, ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಅವರನ್ನು ಪ್ರಧಾನಿ ಮೋದಿ ಔತಣಕೂಟಕ್ಕೆ ಆಹ್ವಾನಿಸಿದ್ದರು. ಇದೇ ವೇಳೆ ಅನೌಪಚಾರಿಕವಾಗಿ ಕೆಲಹೊತ್ತು ಅವರೊಂದಿಗೆ ಮಾತುಕತೆ ಸಹ ನಡೆಸಿದ್ದಾರೆ. ಸೆಲೆಬ್ರಿಟಿಗಳು ಅಷ್ಟೇ ಅಲ್ಲದೇ ಕೆಲವು ಕ್ರಿಕೆಟ್ ತಾರೆಯರನ್ನೂ ಸಹ ಮೋದಿ ಭೇಟಿಯಾಗಿದ್ದಾರೆ. ಭೇಟಿಯಾದ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಅನಿಲ್ ಕುಂಬ್ಳೆ ಟ್ವೀಟ್ ಮಾಡಿದ್ದಾರೆ. 'ಭಾನುವಾರ ರಾತ್ರಿ ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು ತುಂಬಾ ಗೌರವದ ವಿಚಾರವಾಗಿದೆ. ಬೆಂಗಳೂರಿನಲ್ಲಿ ನನ್ನ ಸಹ ಕ್ರಿಕೆಟಿಗರೊಂದಿಗೆ ಪ್ರಧಾನಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಚಿರಕಾಲ ನೆನಪಿನಲ್ಲಿ ಉಳಿಯಲಿದೆ. ಧನ್ಯವಾದಗಳು' ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಅನಿಲ್ ಕುಂಬ್ಳೆ ತಮ್ಮ ಪತ್ನಿ ಚೇತನಾ ಹಾಗೂ ಪ್ರಧಾನಿ ಮೋದಿ ಜತೆಗಿರುವ ಫೋಟೋವನ್ನು ಕಾಣಬಹುದು.
'ಕೆಜಿಎಫ್' ಮತ್ತು 'ಕಾಂತಾರ' ಚಿತ್ರಗಳು ದೇಶಾದ್ಯಂತ ಹೊಸ ಇತಿಹಾಸ ಬರೆದ ಚಿತ್ರಗಳಾಗಿದ್ದು ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದವು. 'ಕೆಜಿಎಫ್' ಚಿತ್ರದ ಬಳಿಕ ನಟ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದರೆ, 'ಕಾಂತಾರ' ಚಿತ್ರದ ಮೂಲಕ ನಟ ರಿಷಬ್ ಶೆಟ್ಟಿ ರಾತ್ರೋರಾತ್ರಿ ದೇಶಾದ್ಯಂತ ದೊಡ್ಡ ಅಭಿಮಾನಿಗಳ ಬಳಗವನ್ನೇ ಸಂಪಾದಿಸಿದವರು. ಇನ್ನು ನಟ ಪುನೀತ್ ರಾಜ್‌ಕುಮಾರ್ ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ನುಂಗಲಾರದ ತುತ್ತಾದರೆ, ಹೊಸಬರಿಗೆ ಅವಕಾಶ ಮಾಡಿಕೊಡುವ ಮೂಲಕ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಸ್ಥಾನವನ್ನು ತುಂಬುತ್ತಿದ್ದಾರೆ. ಈ ಕಾರಣದಿಂದ ಪ್ರಧಾನಿ ಮೋದಿ ಅವರು ಯಶ್, ರಿಷಬ್ ಶೆಟ್ಟಿ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಡಿನ್ನರ್ ಪಾರ್ಟಿಗೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.