ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕೊಂಡೊಯ್ದ ಕೆಜಿಎಫ್ 2 ಕಳೆದ ಏಪ್ರಿಲ್ 14ರಂದು ಬಿಡುಗಡೆ ಆಯಿತು. ಇನ್ನೇನು ಕೆಲ ದಿನಗಳಲ್ಲಿ ವರ್ಷ ಪೂರೈಸಲಿದೆ ಸ್ಯಾಂಡಲ್ವುಡ್ನ ಸೂಪರ್ ಹಿಟ್ ಚಿತ್ರ. ಆದ್ರೆ 'ರಾಕಿಂಗ್ ಸ್ಟಾರ್ 19' ಸಿನಿಮಾ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಯಶ್ ಅವರ ಮುಂದಿನ ಚಿತ್ರ ಯಾವುದು?, ಯಾವ ನಿರ್ದೇಶಕರ ಜೊತೆ ಕೈ ಜೋಡಿಸಲಿದ್ದಾರೆ? ಯಾವ ನಿರ್ಮಾಣ ಸಂಸ್ಥೆ ಈ ಸ್ಟಾರ್ ನಟನ ಚಿತ್ರ ನಿರ್ಮಿಸಲಿದೆ? ನಾಯಕ ನಟಿ ಯಾರು? ಬಜೆಟ್ ಯಾವ ಮಟ್ಟಿಗೆ ಇರಬಹುದು? ಹೀಗೆ ಹಲವು ಪ್ರಶ್ನೆಗಳು ಪ್ರೇಕ್ಷಕ ಪ್ರಭುಗಳಲ್ಲಿದೆ. ಕೆಲ ಅಂತೆ ಕಂತೆಗಳು ಬಂದು ಹೋಗಿದ್ದರೂ ಅಧಿಕೃತ ಘೋಷಣೆ ಆಗಿಲ್ಲ. ಈ ಹೊತ್ತಲ್ಲಿ ಮತ್ತೊಂದು ಅಪ್ಡೇಟ್ ಸಿಕ್ಕಿದ್ದು, ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿದೆ.
ಮುಂದಿನ ದಿನಗಳಲ್ಲಿ ನಟ ಯಶ್ ಅವರು ತೆಲುಗಿನ ದಿಲ್ ರಾಜು ಬ್ಯಾನರ್ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ. ಅದು ಮುಂದಿನ ಸಿನಿಮಾವೇ? ಅಥವಾ ಕೆಲ ಚಿತ್ರಗಳ ಬಳಿಕ ದಿಲ್ ರಾಜು ಅವರ ಜೊತೆ ಕೈ ಜೋಡಿಸಲಿದ್ದಾರೆ ಎಂಬುದು ಮಾತ್ರ ಖಚಿತವಾಗಿಲ್ಲ. ಇತ್ತೀಚೆಗೆ ಅಭಿಮಾನಿಗಳೊಂದಿಗೆ #askdilraju ಸೆಶನ್ ನಡೆಸಿದರು. ಅಭಿಮಾನಿಯೋರ್ವರು ರಾಕಿಂಗ್ ಸ್ಟಾರ್ ಯಶ್ ಜೊತೆ ಸಿನಿಮಾ ನಿರೀಕ್ಷಿಸಬಹುದೇ? ಎಂದು ನೆಟ್ಟಿಗರೋರ್ವರು ಪ್ರಶ್ನಿಸಿದ್ದಾರೆ. ಅದಕ್ಕೆ ದಿಲ್ ರಾಜು 'ಹೌದು' ಎಂದು ಉತ್ತರಿಸಿದ್ದು, ಹೆಚ್ಚೇನು ಮಾಹಿತಿ ಹಂಚಿಕೊಂಡಿಲ್ಲ. ಈ ಬಗ್ಗೆ ಯಶ್ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ.
ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಮತ್ತು ಸಂಸ್ಥೆಯ ಮುಖ್ಯಸ್ಥ ದಿಲ್ ರಾಜು ತೆಲುಗು ಚಿತ್ರರಂಗದಲ್ಲಿ ವಿಶಿಷ್ಟ ಗುರುತನ್ನು ಹೊಂದಿದ್ದಾರೆ. ಈ ಬ್ಯಾನರ್ ಅಡಿ ಹೊಸ ಸಿನಿಮಾಗಳು ಬರುತ್ತಿದೆ. ವಿತರಕರಾಗಿ ವೃತ್ತಿ ಜೀವನ ಆರಂಭಿಸಿದ ದಿಲ್ ರಾಜು 'ದಿಲ್' ಚಿತ್ರದ ಮೂಲಕ ನಿರ್ಮಾಪಕರಾದರು. 20 ವರ್ಷಗಳ ಹಿಂದೆ (2003, ಏಪ್ರಿಲ್ 4) ದಿಲ್ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರ ಮನ ಗೆದ್ದಿತ್ತು. ಅಂದಿನಿಂದ ನಿರ್ಮಾಪಕ ದಿಲ್ ರಾಜು ಅವರು ತಮ್ಮ ಕಂಪನಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿ ಹಲವು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಹಲವು ಚಿತ್ರಗಳು ಹಿಟ್ ಸಾಲಿಗೆ ಸೇರಿವೆ. ಗೋಲ್ಡನ್ ಲೆಗ್ ನಿರ್ಮಾಪಕ ಎಂದು ಖ್ಯಾತಿ ಗಳಿಸಿದ್ದಾರೆ. 20 ವರ್ಷಗಳಲ್ಲಿ 50 ಚಲನಚಿತ್ರಗಳನ್ನು ನಿರ್ಮಿಸಿದ ಕೀರ್ತಿ ಇವರದ್ದು.