ಕರ್ನಾಟಕ

karnataka

ETV Bharat / entertainment

ಮನಸ್ಸು ಬದಲಾಯಿಸಿದ್ರಾ ಯಶ್​​.. ರಾವಣನ ಪಾತ್ರಕ್ಕೆ ಲುಕ್​ ಟೆಸ್ಟ್ ಕೊಡಲಿದ್ದಾರಾ ರಾಕಿಂಗ್​ ಸ್ಟಾರ್? - Yash 19

ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಯಶ್ ನಟಿಸುವ ಸಾಧ್ಯತೆ ಕುರಿತ ಸುದ್ದಿಗಳು ಸಖತ್​ ಸದ್ದು ಮಾಡುತ್ತಿವೆ.

Yash as Ravana in Ramayana movie
ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಯಶ್

By

Published : Jul 19, 2023, 6:20 PM IST

'ಕೆಜಿಎಫ್' ಮತ್ತು 'ಕೆಜಿಎಫ್-2' ಚಿತ್ರಗಳ ಮೂಲಕ ವಿಶ್ವದಾದ್ಯಂತ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಘೋಷಣೆಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬ್ಲಾಕ್​ಬಸ್ಟರ್ ಸಿನಿಮಾ ಕೆಜಿಎಫ್​ 2 ತೆರೆಕಂಡು 1 ವರ್ಷ 3 ತಿಂಗಳು ಕಳೆದಿದ್ದರೂ, ಯಶ್​ 19 ಬಗ್ಗೆ ಯಾವುದೇ ಸುಳಿವಿಲ್ಲ. ಕಳೆದ ಒಂದು ವರ್ಷದಿಂದ ಹೊಸ ಚಿತ್ರದ ಬಗ್ಗೆ ಅಪ್​ಡೇಟ್ಸ್ ಕೊಡಿ ಎಂದು ಅಭಿಮಾನಿಗಳು ಬೇಡಿಕೆ ಇಡುತ್ತಾ ಬಂದಿದ್ದಾರೆ. ಈವರೆಗೆ ಹಲವು ಅಂತೆಕಂತೆಗಳು ಬಂದು ಹೋಗಿವೆ. ಆದ್ರೂ ಸ್ಪಷ್ಟ, ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಲಂಕೇಶ್​ ಪಾತ್ರಕ್ಕೆ ರಾಕಿಂಗ್​ ಸ್ಟಾರ್: ಅವರ ಹೊಸ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಮಟ್ಟದಲ್ಲಿ ಮೂಡಿಬರಲಿರುವ ಹೊಸ 'ರಾಮಾಯಣ' ಪ್ರಾಜೆಕ್ಟ್‌ನಲ್ಲಿ ಯಶ್​ ನಟಿಸುವ ಸಾಧ್ಯತೆ ಇದೆ ಎಂಬುದು ಬಹಳ ದಿನಗಳಿಂದ ಸದ್ದು ಮಾಡುತ್ತಿರುವ ವಿಷಯ. ಯಶ್ ರಾವಣಾಸುರನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ರಾವಣಾಸುರನ ಪಾತ್ರಕ್ಕೆ ಯಶ್ ಲುಕ್ ಟೆಸ್ಟ್: ಈ ಬಗ್ಗೆ ಯಶ್ ಕೂಡ ಇತ್ತೀಚೆಗೆ ಮಾತನಾಡಿ, ಸುದ್ದಿಗಳನ್ನು ನಿರಾಕರಿಸಿದ್ದರು. ನಾನು ಎಲ್ಲಿಗೂ ಹೋಗಲ್ಲ, ಎಲ್ಲರನ್ನೂ ಇಲ್ಲಿಗೆ ಕರೆಸಿಕೊಳ್ಳುತ್ತೇನೆ, ವದಂತಿಗಳ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದ್ದರು. ಆದ್ರೀಗ ಯಶ್ ಮನಸ್ಸು ಬದಲಾಯಿಸಿದಂತೆ ತೋರುತ್ತಿದೆ. ಈ ರೀತಿಯ ವರದಿಗಳು ಹರದಾಡುತ್ತಿವೆ. ಲಂಕೇಶ್​ ರಾವಣಾಸುರನ ಪಾತ್ರಕ್ಕಾಗಿ ಲುಕ್ ಟೆಸ್ಟ್ ಕೊಡಲು ರೆಡಿಯಾಗಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಲುಕ್ ಟೆಸ್ಟ್​ನಲ್ಲಿ ನಟನ ನೋಟ ತೃಪ್ತಿಕರವಾಗಿ ಕಂಡರೆ, ಈ ಬಿಗ್ ಬಜೆಟ್ ಪ್ರಾಜೆಕ್ಟ್​ಗೆ ಯಶ್ ಆಸಕ್ತಿ ತೋರಿಸಲಿದ್ದಾರೆ ಎಂಬ ಮಾಹಿತಿ ಇದೆ. ಯಶ್ ಮುಂದಿನ ನಡೆ, ನಿರ್ಧಾರದ ಬಗ್ಗೆ ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದಲ್ಲಿ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ:ಪ್ರಾಜೆಕ್ಟ್ ಕೆ ಟ್ರೇಲರ್ ಬಿಡುಗಡೆಗೆ ಕ್ಷಣಗಣನೆ.. ಕುತೂಹಲ ಹೆಚ್ಚಿಸಿದ ಪ್ರಭಾಸ್​ ಫಸ್ಟ್ ಲುಕ್‌

ರಾಮಾಯಣ - ಬಿಗ್​ ಬಜೆಟ್​ ಸಿನಿಮಾ: ಈ ಬಿಗ್​​ ಬಜೆಟ್ ಸಿನಿಮಾವನ್ನು ಖ್ಯಾತ ನಿರ್ಮಾಪಕರಾದ ಅಲ್ಲು ಅರವಿಂದ್, ನಮಿತ್ ಮಲ್ಹೋತ್ರಾ ಮತ್ತು ಮಧು ಮಾಂಟೆನಾ ನಿರ್ಮಿಸಲಿದ್ದಾರೆ. ಸುಮಾರು 1,500 ಕೋಟಿ ರೂ. ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ನಿತೇಶ್ ತಿವಾರಿ ಈ ಬಿಗ್​ ಬಜೆಟ್​​ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಈ ವರ್ಷದ ಕೊನೆಯಲ್ಲಿ ರಾಮಾಯಣ ಸೆಟ್ಟೇರಲಿದೆ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. ಚಿತ್ರದಲ್ಲಿ ಬಾಲಿವುಡ್‌ನ ಚಾಕೊಲೇಟ್ ಬಾಯ್ ರಣ್​​ಬೀರ್ ಕಪೂರ್ ರಾಮನ ಪಾತ್ರದಲ್ಲಿ ಮತ್ತು ಅವರ ಪತ್ನಿ, ನಟಿ ಆಲಿಯಾ ಭಟ್ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ತಾರಾ ಜೋಡಿ ಈಗಾಗಲೇ 'ಬ್ರಹ್ಮಾಸ್ತ್ರ' ಎಂಬ ಬಿಗ್​ ಬಜೆಟ್​ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.

ಇದನ್ನೂ ಓದಿ:'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಬಿಡುಗಡೆ ಆಗಬಾರದೆಂದು ನ್ಯಾಯಾಲಯದ ಮೆಟ್ಟಿಲೇರಿದ ನಟಿ ರಮ್ಯಾ!

'ನಾನೆಲ್ಲಿಯೂ ಹೋಗಲ್ಲ'....ಇತ್ತೀಚೆಗೆ ಮೈಸೂರು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ವೇಳೆ ಮಾತನಾಡಿದ್ದ ನಟ ಯಶ್​, ''ಸಿನಿಮಾ ಕೆಲಸಗಳು ನಡೆಯುತ್ತಿದೆ. ಎಲ್ಲರೂ ಖುಷಿ ಪಡುವ ಹಾಗೆ ಸಿನಿಮಾ ಮಾಡುತ್ತೇವೆ. ಜನರು ಹಣ ಕೊಟ್ಟು ಸಿನಿಮಾ ನೋಡುತ್ತಾರೆ. ಹಾಗಾಗಿ ಒಂದೊಳ್ಳೆ ಸಿನಿಮಾ ಕೊಡುವ ಜವಾಬ್ದಾರಿ ನನ್ನ ಮೇಲಿದೆ. ಪ್ರೇಕ್ಷಕರು ಖುಷಿ ಪಡುವ ಸಿನಿಮಾ ಮಾಡಬೇಕು. ಸಮಯ ವ್ಯರ್ಥ ಮಾಡದೇ ಸಿನಿಮಾ ಕೆಲಸ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಹೊಸ ಚಿತ್ರ ಘೋಷಿಸುತ್ತೇವೆ'' ಎಂದು ತಿಳಿಸಿದ್ದರು. ಇನ್ನು ರಾಮಾಯಣ ಸಿನಿಮಾ ಕುರಿತ ವದಂತಿಗಳಿಗೆ ಪ್ರತಿಕ್ರಿಯಿಸಿ, "ನಾನೆಲ್ಲಿಯೂ ಹೋಗಲ್ಲ, ಎಲ್ಲರನ್ನೂ ನಾನಿರುವ ಕಡೆಗೆ ಕರೆಸಿಕೊಳ್ಳುತ್ತೇನೆ" ಎಂದು ತಿಳಿಸಿದ್ದರು. ಇದೀಗ ಮತ್ತೊಮ್ಮೆ ರಾವಣನ ಪಾತ್ರಕ್ಕೆ ಯಶ್​ ಹೆಸರು ಕೇಳಿ ಬರುತ್ತಿದ್ದು, ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬರಬೇಕಿದೆ.

ABOUT THE AUTHOR

...view details