ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ತಿಳಿದುಕೊಳ್ಳಲು ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದೆ. ಕೆಜಿಎಫ್ 2 ಬಳಿಕ ನಟ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಒಂದು ವರ್ಷದಿಂದ ಯಶ್ 19 ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಲೇ ಇವೆ. ಇತ್ತೀಚೆಗಷ್ಟೇ ಗಣೇಶ ಚತುರ್ಥಿಗೆ ಯಶ್ ಅವರು ತಮ್ಮ ಮುಂದಿನ ಸಿನಿಮಾವನ್ನು ಅನೌನ್ಸ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದು ಕೂಡ ಕೇವಲ ಊಹಾಪೋಹವಾಗಿ ಉಳಿದುಕೊಂಡಿದೆ.
ಹೌದು.., ಕೆಜಿಎಫ್ 2 ಬಿಡುಗಡೆಯಾಗಿ ಬ್ಲಾಕ್ಬಸ್ಟರ್ ಹಿಟ್ ಆದ ನಂತರದ ದಿನಗಳಿಂದ ರಾಕಿ ಆರಾಧಕರನ್ನು ಕಾಡುತ್ತಿರುವ ಏಕೈಕ ಪ್ರಶ್ನೆ ಅಂದ್ರೆ ಯಶ್ 19 ಸಿನಿಮಾ ಯಾವುದು? ಯಾರ ಜೊತೆ? ಚಿತ್ರಕಥೆ ಏನು? ನಾಯಕಿ ಯಾರು?. ಈ ವಿಚಾರವಾಗಿ ದಿನಗಳ ಜೊತೆ ಸಾಕಷ್ಟು ಅಂತೆ ಕಂತೆಗಳೂ ಉರುಳಿ ಹೋಗಿವೆ. ರಾಧಿಕಾ ಪಂಡಿತ್ ಹಂಚಿಕೊಳ್ಳುವ ಪ್ರತಿ ಪೋಸ್ಟ್ ಕಮೆಂಟ್ನಲ್ಲೂ ಯಶ್ 19 ಬಗ್ಗೆ ಮಾಹಿತಿ ನೀಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇಷ್ಟಾದ್ರೂ ಯಶ್ ಮಾತ್ರ ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ.
ಆದರೆ, ಈ ಮಧ್ಯೆ ಯಶ್ 19 ಬಗ್ಗೆ ಸೋಷಿಯಲ್ ಮೀಡಿಯಾದಲ್ಲೊಂದು ವಿಚಾರ ಸದ್ದು ಮಾಡುತ್ತಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 'ಲೈಯರ್ಸ್ ಡೈಸ್' ಚಿತ್ರಕ್ಕಾಗಿ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವ ಗೀತು ಅವರ ಸ್ಕ್ರಿಪ್ಟ್ಗೆ ಯಶ್ ಒಲವು ತೋರಿದ್ದಾರೆ ಎನ್ನಲಾಗಿದೆ. ಈ ಚಿತ್ರ ಬಹುತೇಕ ಕನ್ಫರ್ಮ್ ಆಗಿದೆ ಎಂಬುದು ಸದ್ಯದ ಮಾಹಿತಿ.