ಹೈದರಾಬಾದ್: ಬಾಲಿವುಡ್ ನಟ ಹೃತಿಕ್ ರೋಷನ್ ಇಂದು 50ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ನಟನೆ, ನೃತ್ಯ, ಫಿಟ್ನೆಸ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಹೃತಿಕ್, ಬಾಲಿವುಡ್ ಗ್ರೀಕ್ ಗಾಡ್ (Greek God of Bollywood) ಎಂದೇ ಪ್ರಸಿದ್ಧರಾಗಿದ್ದಾರೆ. ಕಳೆದ 22 ವರ್ಷಗಳಿಂದ ಬಾಲಿವುಡ್ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಹ್ಯಾಂಡ್ಸಮ್ ಹೀರೋ ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಹೃತಿಕ್ ರೋಷನ್ ಮೊದಲಾಗಿ 1980ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1980ರಲ್ಲಿ ಆಪ್ ಕೆ ದಿವಾನೆ, ಆಶಾ(1980), ಭಗವಾನ್ ದಾದಾ(1986) ಸೇರಿದಂತೆ ಹಲವು ಸಿನೆಮಾಗಳಲ್ಲಿ ಬಾಲ ನಟನಾಗಿ ಮತ್ತು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಬಳಿಕ ತಂದೆ ರಾಕೇಶ್ ರೋಷನ್ ಅವರ ನಿರ್ಮಾಣದ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. 2000ರಲ್ಲಿ ಕಹೋನಾ ಪ್ಯಾರ್ ಹೈ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸಿದರು. ಈ ಚಿತ್ರವು ಸೂಪರ್ ಡೂಪರ್ ಹಿಟ್ ಆಗಿ ಹೃತಿಕ್ ರೋಷನ್ ಅವರಿಗೆ ಹೆಸರನ್ನು ತಂದುಕೊಟ್ಟಿತು. ರಾತ್ರೋರಾತ್ರಿ ಬಾಲಿವುಡ್ನಲ್ಲಿ ಸ್ಟಾರ್ಡಂ ಪಡೆದುಕೊಂಡರು. ಬಳಿಕ ಹಲವು ಸಿನಿಮಾಗಳಲ್ಲಿ ಏಳುಬೀಳುಗಳನ್ನು ಕಂಡರೂ ಸದ್ಯ ಬಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ.
ಹೃತಿಕ್ ಅಮೋಘ ಅಭಿನಯ, ಡ್ಯಾನ್ಸ್ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಇವರ ಅಭಿನಯಕ್ಕೆ ಆರು ಫಿಲ್ಮ್ ಫೇರ್ ಪ್ರಶಸ್ತಿ, ನಾಲ್ಕು ಉತ್ತಮ ನಟ ಪ್ರಶಸ್ತಿ, ಚೊಚ್ಚಲ ಅತ್ಯುತ್ತಮ ನಟ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಹೃತಿಕ್ ರೋಷನ್ ಅವರ ಹುಟ್ಟುಹಬ್ಬದಂದು ಮುಂಬರುವ ಚಿತ್ರಗಳ ಬಗ್ಗೆ ನೋಡೋಣ.
ಫೈಟರ್ :ಹೃತಿಕ್ ಅಭಿನಯದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಫೈಟರ್ ಕೂಡ ಒಂದು. ಈ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಇಂಡಿಯನ್ ಏರ್ ಫೋರ್ಸ್ ಅಧಿಕಾರಿಗಳ ಕಥೆಯನ್ನು ಹೊಂದಿದ್ದು, ಇದೇ ಜನವರಿ 25ರಂದು ತೆರೆಕಾಣಲಿದೆ.