ಮುಂಬೈ (ಮಹಾರಾಷ್ಟ್ರ): 'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರದ ಪ್ರಚಾರದಲ್ಲಿದ್ದ ಬಾಲಿವುಡ್ ನಟ ವಿಕ್ಕಿ ಕೌಶಲ್ಗೆ ಪತ್ರಕರ್ತರೊಬ್ಬರು ವಿಚ್ಛೇದನ ಕುರಿತು ಪ್ರಶ್ನೆ ಕೇಳಿ ಸಂಕಷ್ಟಕ್ಕೆ ಸಿಲುಕಿಸಿದ ಪ್ರಸಂಗ ನಡೆದಿದೆ. ಈ ಚಿತ್ರವು ಮದುವೆ, ಡಿವೋರ್ಸ್, ಮರು ಮದುವೆ ಹೇಳುವ ಕಥೆಯಾಧಾರಿತ ಚಿತ್ರವಾಗಿದೆ. ಇಂತಹದ್ದೇ ಘಟನೆ ನಿಮ್ಮ ಜೀವನದಲ್ಲಿ ಸಂಭವಿಸಿದರೆ ಏನು ಮಾಡುತ್ತೀರಿ ಎಂದು ಕೇಳುವ ಮೂಲಕ ಗೊಂದಲಕ್ಕೀಡು ಮಾಡಿದ್ದರು. ಇವರ ಪ್ರಶ್ನೆ ಕೇಳಿದ ವಿಕ್ಕಿ ಕೌಶಲ್, ಅರೆ ಕ್ಷಣ ತಬ್ಬಿಬ್ಬಾದ ಪ್ರಸಂಗ ನಡೆಯಿತು.
ಹೌದು, 'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ವರದಿಗಾರೊಬ್ಬ ಮಾತಿನ ಮಧ್ಯದಲ್ಲಿ ಕತ್ರಿನಾ ಕೈಫ್ ಅವರಿಗಿಂತ ಉತ್ತಮವಾಗಿರುವ ಬೇರೆ ಹುಡುಗಿ ಸಿಕ್ಕರೆ ಮರು ಮದುವೆ ಆಗುತ್ತೀರಾ? ಅವರಿಗೆ ಡಿವೋರ್ಸ್ ನೀಡುತ್ತೀರಾ?’ ಎಂದು ಕೇಳಿ ಸಂಕಷ್ಟಕ್ಕೆ ಸಿಲುಕಿಸಿದ ಘಟನೆ ನಡೆಯಿತು. ಮಾತಿನ ಮಧ್ಯದಲ್ಲಿ ಪತ್ರಕರ್ತರಿಂದ ತೂರಿಬಂದ ಈ ಗೂಗ್ಲಿ ಪ್ರಶ್ನೆಗೆ ಉತ್ತರಿಸಲಾಗದೇ ಅರೆಕ್ಷಣ ತಡಬಡಿಸಿದ ವಿಕ್ಕಿ ಕೌಶಲ್, ಮಾತು ಬಾರದೇ ಮೌನ ವಹಿಸಿದ್ದರು.
ಆದರೆ, ಪತ್ರಕರ್ತರ ಈ ಪ್ರಶ್ನೆಯನ್ನು ತಮಾಷೆಯಾಗಿ ತೆಗೆದುಕೊಂಡ ವಿಕ್ಕಿ ಕೌಶಲ್, ಸ್ವಲ್ಪ ಸಮಯದ ಬಳಿಕ ಸರ್, ನಾನು ಸಂಜೆ ಮನೆಗೆ ಹಿಂತಿರುಗಬೇಕು! ನೀವು ಇಂತಹ ಗೂಗ್ಲಿ ಮತ್ತು ಟ್ರಿಕಿ ಪ್ರಶ್ನೆಗಳನ್ನು ಕೇಳಿದರೆ ನಾನು ಏನೆಂದು ಉತ್ತರ ನೀಡಬೇಕು? ಇಂತಹ ವಿಷಯದಲ್ಲಿ ನಾನಿನ್ನು ತುಂಬಾ ಚಿಕ್ಕವನು. ಅಲ್ಲದೇ ನಾನಿನ್ನು ಬಾಲಿವುಡ್ನಲ್ಲಿ ಬೆಳೆಯುತ್ತಿರುವ ಮಗು, ಬೆಳೆಯಲು ಬಿಡಿ. ನಿಮ್ಮ ಅಪಾಯಕಾರಿ ಪ್ರಶ್ನೆಗೆ ಹೇಗೆ ಉತ್ತರಿಸಬೇಕು? ಎಂದು ಹಾಸ್ಯ ಚಟಾಕೆ ಹಾರಿಸಿದರು.