ನಾಗ ಚೈತನ್ಯ ಅವರು ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್ ಸಲುವಾಗಿ ಚಂದೂ ಮೊಂಡೇಟಿ (Chandoo Mondeti) ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ನಾಗ ಚೈತನ್ಯ ಮತ್ತು ಚಂದೂ ಮೊಂಡೇಟಿ ಕಾಂಬೋದಲ್ಲಿ ಪ್ರೇಮಂ, ಸವ್ಯಸಾಚಿಯಂತಹ ಸಿನಿಮಾಗಳು ಮೂಡಿ ಬಂದಿದ್ದವು. ಈ ಎರಡೂ ಸಿನಿಮಾಗಳೂ ಸಹ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತ್ತು. ಇದೀಗ ಮೂರನೇ ಸಿನಿಮಾ ಮಾಡಲು ತಯಾರಿ ನಡೆದಿದೆ. ಚಿತ್ರದಲ್ಲಿ ನಟಿ ಕೀರ್ತಿ ಸುರೇಶ್ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
'ಮಹಾನಟಿ'ಯಲ್ಲಿ ಕಾಣಿಸಿಕೊಂಡಿದ್ದ ಕಲಾವಿದರು:ಇದು ಕೀರ್ತಿ ಸುರೇಶ್ ಮತ್ತು ನಾಗ ಚೈತನ್ಯ ಅವರ ಎರಡನೇ ಪ್ರಾಜೆಕ್ಟ್. ಬ್ಲಾಕ್ಬಸ್ಟರ್ ಸಿನಿಮಾ 'ಮಹಾನಟಿ'ಯಲ್ಲಿ ನಟಿಸಿದ ಈ ಜೋಡಿ ಮತ್ತೊಂದು ಹೊಸ ಸಿನಿಮಾದಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಈ ಬಯೋಪಿಕ್‌ನಲ್ಲಿ ನಾಗ ಚೈತನ್ಯ ತಮ್ಮ ದಿವಂಗತ ಅಜ್ಜ ಅಕ್ಕಿನೇನಿ ನಾಗೇಶ್ವರ್ ರಾವ್ ಪಾತ್ರವನ್ನು ನಿರ್ವಹಿಸಿದ್ದರು.
ಘೋಷಣೆಯಾಗಬೇಕಿರುವ ಮುಂದಿನ ಸಿನಿಮಾದಲ್ಲಿ ಕೀರ್ತಿ ಸುರೇಶ್ ಮತ್ತು ನಾಗ ಚೈತನ್ಯ ಅವರು ಪೂರ್ಣ ಪ್ರಮಾಣದಲ್ಲಿ ನಟಿಸಲಿದ್ದಾರೆ. ಆದಾಗ್ಯೂ, ಈ ಬಗ್ಗೆ ಅಧಿಕೃತ ದೃಢೀಕರಣವನ್ನು ನಿರೀಕ್ಷಿಸಲಾಗುತ್ತಿದೆ. ಬನ್ನಿ ವಾಸ್ ಮತ್ತು ಅವರ ತಂಡ ಈ ಯೋಜನೆಗೆ ಹಣಕಾಸು ಒದಗಿಸಲಿದ್ದಾರೆ ಎಂದು ವದಂತಿಗಳಿವೆ. ಬನ್ನಿ ವಾಸ್ ನಿರ್ಮಾಣದಲ್ಲಿ ಮೂಡಿ ಬರಲಿರುವ ಎರಡನೇ ಸಿನಿಮಾವಿದು.
ದೋಣಿ ಚಾಲಕನ ಪಾತ್ರದಲ್ಲಿ ನಾಗ ಚೈತನ್ಯ: ಕೀರ್ತಿ ಸುರೇಶ್ ಮತ್ತು ನಾಗ ಚೈತನ್ಯ ನಟಿಸಲಿರುವ ಈ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ. ಇದರಲ್ಲಿ ನಾಯಕನು ತನ್ನ ಹುಡುಗಿಗಾಗಿ ಸಾಕಷ್ಟು ರಿಸ್ಕ್ ತೆಗೆದುಕೊಳ್ಳುತ್ತಾನೆ. ಕೊನೆಯಲ್ಲಿ ಬಹಳಷ್ಟು ತಿರುವುಗಳೊಂದಿಗೆ ಸಿನಿಮಾ ಮುಕ್ತಾಯಗೊಳ್ಳುತ್ತದೆ. ವರದಿಗಳ ಪ್ರಕಾರ, ನಟ ನಾಗ ಚೈತನ್ಯ ದೋಣಿ ಚಾಲಕನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರ ತಂಡ ಈ ಸ್ಕ್ರಿಪ್ಟ್‌ಗಾಗಿ ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಯೋಜನೆಯನ್ನು ಘೋಷಿಸಲಾಗುವುದು ಎಂದು ಹೇಳಲಾಗಿದೆ.