ಪ್ರಯಾಗರಾಜ್ (ಉತ್ತರ ಪ್ರದೇಶ): ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಹಾಕಿದ್ದ ಆರೋಪಿ ಶೇರಾ, ಇದೀಗ ನಗರದ ಉದ್ಯಮಿಯೊಬ್ಬರಲ್ಲಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ. ಕರೇಲಿ ಪೊಲೀಸರು ಆತನ ವಿರುದ್ಧ ಕೊಲೆ ಯತ್ನ, ಬೆದರಿಕೆ ಸೇರಿದಂತೆ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೊದಲೇ ಆರೋಪಿ ತಾನು ಭೂಗತ ಪಾತಕಿ ಛೋಟಾ ಶಕೀಲ್ ಮತ್ತು ಮಸಲ್ ಮ್ಯಾನ್ ಅತೀಕ್ ಅಹ್ಮದ್ ಅವರ ಆಪ್ತ ಎಂದು ಹೇಳಿಕೊಂಡಿದ್ದ.
ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿದ್ದ ಹಿನ್ನೆಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಜೈಲಿಗಟ್ಟಿದ್ದರು. ಬಂಧನದಿಂದ ಹೊರಬಂದಿದ್ದ ಬಳಿಕ ಇದೀಗ ಮತ್ತೆ ಪ್ರಯಾಗರಾಜ್ನ ಉದ್ಯಮಿಯೊಬ್ಬರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಎರಡು ವರ್ಷದಿಂದ ಬೆದರಿಕೆ:ಪ್ರಯಾಗರಾಜ್ ನಿವಾಸಿ, ಉದ್ಯಮಿ ಜಿಶಾನ್ ಝಾಕಿರ್ ಅವರು, ತಮಗೆ 2 ವರ್ಷಗಳಿಂದ ಬೆದರಿಕೆ ಕರೆ ಬರುತ್ತಿರುವುದಾಗಿ ಕರೇಲಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಡಿಸಿಪಿ ಸಿಟಿ ದೀಪಕ್ ಭುಕರ್ ತಿಳಿಸಿದ್ದಾರೆ. ಶೇರಾ ಎಂಬ ಕ್ರಿಮಿನಲ್ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ. 10 ಲಕ್ಷಕ್ಕೆ ಬೇಡಿಕೆ ಇಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ನವೆಂಬರ್ 10 ರಂದು ಆತ ತನ್ನ ಮೂರು ಸಹಚರರೊಂದಿಗೆ ಬಂದು ಗುಂಡು ಹಾರಿಸಿದ್ದ. ನಾನು ಇದರಿಂದ ಸ್ವಲ್ಪದರಲ್ಲೇ ಪಾರಾಗಿದ್ದೆ. ಬಳಿಕ ಶೇರಾ ಆತನ ಸಹಚರರೊಂದಿಗೆ ಸೇರಿ ನನ್ನನ್ನು ಹೊಡೆದು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.