ಬೆಂಗಳೂರು:ಪ್ರಪಂಚದಾದ್ಯಂತ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಹಾಗೂ ಪ್ರಶಂಸೆ ಎರಡನ್ನು ಪಡೆದಿರುವ ಸಿನಿಮಾ ವೇರ್ ಇಸ್ ಪಿಂಕಿ. ಅಕ್ಷತಾ ಪಾಂಡವಪುರ, ದೀಪಕ್ ಸುಬ್ರಹ್ಮಣ್ಯ ಮುಖ್ಯ ಭೂಮಿಕೆಯಲ್ಲಿರೋ ಪಿಂಕಿ ಚಿತ್ರ ಈಗ ಪ್ರೇಕ್ಷಕರಿಗಾಗಿ ತೆರೆ ಮೇಲೆ ಬರಲಿದೆ. ಈ ವಿಚಾರವನ್ನು ಪಿಂಕಿ ಚಿತ್ರತಂಡ ಹಂಚಿಕೊಂಡಿದೆ.
ಈ ಕುರಿತು ಮೊದಲು ಮಾತನಾಡಿದ ನಟಿ ಅಕ್ಷತಾ ಪಾಂಡವಪುರ, ನಿರ್ದೇಶಕರು ಕಥೆ ಹೇಳುವ ರೀತಿಯೇ ವಿಭಿನ್ನ. ನನಗೂ ಅವರು ಕಥೆ ಹೇಳುವ ರೀತಿ ಆಶ್ಚರ್ಯವಾಯಿತು. ಈ ಚಿತ್ರದಲ್ಲಿ ಮಗುವನ್ನು ಕಳೆದುಕೊಂಡಿರುವ ತಾಯಿಯ ಪಾತ್ರ ನನ್ನದು ಈಗಾಗಲೇ ಪಿಂಕಿ ಸಿನಿಮಾ ಪ್ರಪಂಚದಾದ್ಯಂತ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ನಿರ್ದೇಶಕ ಪೃಥ್ವಿ ಕೋಣನೂರು ಮಾತನಾಡಿ ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಕಥೆಯಿದು. ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯೂ ಹೌದು. ಮಗುವೊಂದು ಕಾಣೆಯಾಗಿರುತ್ತದೆ. ಆದರೆ ಈ ಕಥೆ ಮಗುವಿನ ಸುತ್ತ ಇರುವುದಿಲ್ಲ. ಮಗುವನ್ನು ಕಳೆದುಕೊಂಡವರ ಸುತ್ತ ಇರುತ್ತದೆ. ಕಥೆಯ ಒಂದೆಳೆ ಕೇಳಿ ಮೆಚ್ಚಿಕೊಂಡ ನಿರ್ಮಾಪಕ ಕೃಷ್ಣೇಗೌಡ ಅವರು ನಿರ್ಮಾಣಕ್ಕೆ ಮುಂದಾಗಿದ್ದರು. ಅಕ್ಷತಾ ಪಾಂಡವಪುರ, ದೀಪಕ್ ಸುಬ್ರಹ್ಮಣ್ಯ, ಪೃಥ್ವಿ, ಗುಂಜಲಮ್ಮ, ಸಂಗಮ್ಮ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅದರಲ್ಲೂ ಗುಂಜಲಮ್ಮ ಹಾಗೂ ಸಂಗಮ್ಮ ಇಬ್ಬರೂ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಸ್ಲಂ ನಿವಾಸಿಗಳು. ನಟನೆ ಗೊತ್ತಿಲ್ಲದ ಇವರು ಸಹಜವಾಗಿ ಅಭಿನಯಿಸಿರುವುದು ಈ ಚಿತ್ರದ ವಿಶೇಷ ಎಂದರು.