ಡಿಸೆಂಬರ್ 2 ರಂದು ಮಧ್ಯಾಹ್ನ 2.09ಕ್ಕೆ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ ಬ್ಯಾನರ್ನ ವಿಜಯ್ ಕಿರಂಗದೂರು ತಮ್ಮ ಹೊಸ ಸಿನಿಮಾ ಅನೌನ್ಸ್ ಮಾಡಿದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದು ಈಗಾಗಲೇ ಅವರ ಫಸ್ಟ್ಲುಕ್ ಕೂಡಾ ಬಿಡುಗೆಯಾಗಿದೆ.
'ಸಲಾರ್' ನಿಜಕ್ಕೂ ಅರೇಬಿಯನ್ ಪದಾನಾ....ಅದರ ಅರ್ಥವೇನು...?
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಸಲಾರ್' ಚಿತ್ರೀಕರಣ 2021 ಜನವರಿಯಿಂದ ಆರಂಭವಾಗಲಿದೆ. ಸಲಾರ್ ಎಂದರೆ ಉರ್ದು ಭಾಷೆಯಲ್ಲಿ ಪರಿಣಾಮಕಾರಿ ನಾಯಕ ಎಂದು ಪ್ರಶಾಂತ್ ನೀಲ್ ತಮ್ಮ ಸಿನಿಮಾ ಟೈಟಲ್ ಅರ್ಥವನ್ನು ತಿಳಿಸಿದ್ದಾರೆ.
ಇದರೊಂದಿಗೆ ಈ ಚಿತ್ರಕ್ಕೆ 'ಸಲಾರ್' ಎಂಬ ಶೀರ್ಷಿಕೆಯನ್ನು ಇಟ್ಟಿರುವುದಕ್ಕೆ ಕೂಡಾ ಹಲವರಿಂದ ಟೀಕೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಕೂಡಾ ಈ ಸಿನಿಮಾ ಟೈಟಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕನ್ನಡ , ಸಂಸ್ಕೃತ ಸೇರಿ ಉಳಿದ ಆರು ಶಾಸ್ತ್ರೀಯ ಭಾಷೆಗಳಲ್ಲಿ ನಿಮಗೆ ಬೇರೆ ಯಾವ ಹೆಸರೂ ಸಿಗಲಿಲ್ವಾ...? ಅರೇಬಿಯನ್ ಪದವನ್ನು ಈ ಸಿನಿಮಾಗೆ ಏಕೆ ಇಟ್ಟಿದ್ದೀರಿ ಎಂದು ಪ್ರಶಾಂತ್ ಸಂಬರ್ಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ಪದಕ್ಕೆ ಒಬ್ಬೊಬ್ಬರು ಒಂದೊಂದು ಅರ್ಥ ಹೇಳುತ್ತಿದ್ದರು. ಆದರೆ ಈ ಬಗ್ಗೆ ಸ್ವತ: ಪ್ರಶಾಂತ್ ನೀಲ್ ಪ್ರತಿಕ್ರಿಯಿಸಿದ್ದಾರೆ. ''ಸಲಾರ್ ಎಂಬುದು ಒಂದು ಸಾಮಾನ್ಯ ಪದ. ಉರ್ದು ಭಾಷೆಯಲ್ಲಿ ಸಲಾರ್ ಎಂದರೆ ಒಬ್ಬ ಪರಿಣಾಮಕಾರಿ ನಾಯಕ. ರಾಜನ ನಂಬಿಕಸ್ಥ ಹಾಗೂ ಜನರ ಯೋಗಕ್ಷೇಮ ಕಾಪಾಡುವವನು ಎಂದು ಕೂಡಾ ಇದನ್ನು ಅರ್ಥೈಸಬಹುದು. ಪೋಸ್ಟರ್ನಲ್ಲಿ ಪ್ರಭಾಸ್ ಲುಕ್ ನೋಡಿದವರು ಇದರಲ್ಲಿ ಪ್ರಭಾಸ್ ಬಹುಶ: ಸೈನಿಕ ಇರಬಹುದು ಎನ್ನುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆಯಾಗುವವರೆಗೂ ಕಾಯಿರಿ. ಒಂದೊಳ್ಳೆ ಪಾತ್ರವನ್ನು ನಾವು ನಿಮ್ಮ ಮುಂದೆ ತರಲಿದ್ದೇವೆ'' ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.
ಸಲಾರ್ ಚಿತ್ರೀಕರಣ ಮುಂದಿನ ವರ್ಷ ಜನವರಿಯಲ್ಲಿ ಆರಂಭವಾಗಲಿದೆ. ಒಂದೆಡೆ ಚಿತ್ರದ ಟೈಟಲ್ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಚಿತ್ರದ ಟೈಟಲ್ ಏನೇ ಇರಬಹುದು, ನಮಗೆ ಒಳ್ಳೆ ಸಿನಿಮಾ ಬೇಕು ಅಷ್ಟೇ ಎಂಬುದು ಮತ್ತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.