ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್' ಸೀಸನ್ 5 ಮುಕ್ತಾಯಗೊಂಡಿದೆ. ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯ ಅತಿಥಿಯಾಗಿ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಿದ್ದರು. ಆಕರ್ಷಕವಾಗಿರುವ ಕೆಂಪು ಸೀಟ್ನಲ್ಲಿ ಕುಳಿತು ಬಾಲ್ಯ, ಶಿಕ್ಷಣ, ಉದ್ಯೋಗ, ಕುಟುಂಬ, ಸ್ನೇಹಿತರು ಹೀಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನಗೈದಿರುವ ಡಿಕೆಶಿ ತಮ್ಮ ಜೀವನದ ಕಥೆಯನ್ನು ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ.
ಶಾಲೆಯಿಂದ ಟಿಸಿ ಕೊಟ್ಟು ಕಳುಹಿಸಿದ್ರು..ಡಿಕೆ ಶಿವಕುಮಾರ್ ತಮ್ಮ ಬಾಲ್ಯ ಮತ್ತು ಶಾಲೆಯ ನೆನಪುಗಳನ್ನು ಸಾಧಕರ ಸೀಟ್ನಲ್ಲಿ ಮೆಲುಕು ಹಾಕಿದ್ದಾರೆ. "ಕನಕಪುರದಲ್ಲಿ ಹುಟ್ಟಿದ್ದ ನಾನು ವಿದ್ಯಾಭ್ಯಾಸ ಪಡೆದದ್ದು ಬೆಂಗಳೂರಿನಲ್ಲಿ. ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಾರ್ಮೆಲ್ ಹೈಸ್ಕೂಲ್ ಮತ್ತು ವಿದ್ಯಾವರ್ಧಕ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದೆ. ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ನನಗೆ ಟಿಸಿ ಕೊಟ್ಟು ಕಳುಹಿಸಿದ್ದರು. ಅಲ್ಲಿನ ಸ್ಟ್ಯಾಂಡರ್ಡ್ ನನಗೆ ಸರಿ ಬರಲಿಲ್ಲ. ನನ್ನನ್ನು ಅಲ್ಲಿಂದ ಕಳುಹಿಸಿಬಿಟ್ಟರಲ್ಲ ಅಂತ ಅವರ ಮೇಲೆ ನನಗೂ ದ್ವೇಷ ಬೆಳೆದಿತ್ತು. ಆದರೆ ಅದೇ ಸ್ಕೂಲ್ನಲ್ಲಿ ನನ್ನ ಓದಿಸ್ಬೇಕು ಅಂತ ತಂದೆ ತಾಯಿಗೆ ಆಸೆ ಇತ್ತು."
"ನಂತರ ಕಾರ್ಮೆಲ್ ಹೈಸ್ಕೂಲ್ಗೆ ನನ್ನನ್ನು ಸೇರಿಸಿದ್ದರು. ಅಲ್ಲಿ ನಾನು ಎಲೆಕ್ಷನ್ಗೆ ನಿಂತಿದ್ದೆ. ಹೆಚ್ಚು ಮತಗಳಿಂದ ನಾನು ಗೆದ್ದಿದ್ದೆ. ಆದರೆ ಅಲ್ಲಿ ನನ್ನ ಹೆಸರನ್ನು ಅನೌನ್ಸ್ ಮಾಡದೇ ನನ್ನ ಪ್ರತಿಸ್ಪರ್ಧಿಯಾಗಿ ನಿಂತಿದ್ದ ಹುಡುಗಿಯ ಹೆಸರನ್ನು ಶಾಲಾ ಮುಖ್ಯಮಂತ್ರಿಯಾಗಿ ಘೋಷಿಸಿದ್ದರು. ನನಗೆ ಸ್ಪೋರ್ಟ್ಸ್ ಸೆಕ್ರೆಟರಿಯ ಪಟ್ಟವನ್ನು ಕಟ್ಟಿದ್ದರು. 6ನೇ ಕ್ಲಾಸ್ನಿಂದಲೇ ನಾನು ಭಾಷಣ ಮಾಡುತ್ತಿದ್ದೆ. ಐಸ್ಕ್ಯಾಂಡಿ ಮಾರುವವನು ಕೆಂಚ ಅಂತ ಇದ್ದ. ಅವನ ಬಳಿಯಲ್ಲೇ ನಾನು ಭಾಷಣ ಬರೆಸಿಕೊಳ್ಳುತ್ತಿದ್ದೆ. ಆಗಲೇ ನನ್ನ ಭಾಷಣ ಕೇಳಿ ವಿದ್ಯಾರ್ಥಿಗಳು ನನಗೆ ವೋಟ್ ಹಾಕಿದ್ದರು." ಎಂದರು.