ಟಾಲಿವುಡ್ ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರ ಮೆಗಾ ಪ್ರಿನ್ಸ್ ವರುಣ್ ತೇಜ್ ಇನ್ನೇನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಾಗಿದ್ದಾರೆ. ಜೂನ್ 9ರಂದು ನಟಿ ಲಾವಣ್ಯ ತ್ರಿಪಾಠಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ನಟ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ನವೆಂಬರ್ 1ರಂದು ಇಟಲಿಯಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಡೆಸ್ಟಿನೇಶನ್ ವೆಡ್ಡಿಂಗ್ ಪ್ಲಾನ್ ಮಾಡಲಾಗಿದೆ.
ಇದೀಗ ಮದುವೆಯ ನಿಮಿತ್ತ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ತಮ್ಮ ಕುಟುಂಬದ ಜೊತೆ ಇಟಲಿಗೆ ತೆರಳಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಇವರೆಲ್ಲರೂ ಹೈದರಾಬಾದ್ನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವರುಣ್ ವೈಟ್ ಟಿ-ಶರ್ಟ್ಗೆ ಬ್ಲ್ಯಾಕ್ ಜಾಕೆಟ್ ಮತ್ತು ಡೆನಿಮ್ ಧರಿಸಿದ್ದರು. ಲಾವಣ್ಯ ತ್ರಿಪಾಠಿಬೀಜ್ ಬಾಡಿಕಾನ್ ಡ್ರೆಸ್ನ್ನು ಆಯ್ಕೆ ಮಾಡಿಕೊಂಡಿದ್ದರು. ಇವರೊಂದಿಗೆ ವರುಣ್ ಸಹೋದರಿ ನಿಹಾರಿಕಾ ಕೊನಿಡೇಲಾ ಮತ್ತು ನಟನ ಸೋದರ ಸಂಬಂಧಿ ವೈಷ್ಣವ್ ತೇಜ್ ಕೂಡ ಇದ್ದರು.
ಆಮಂತ್ರಣ ಪತ್ರಿಕೆ ವೈರಲ್:ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿಲ್ವರ್ ಬಣ್ಣದಲ್ಲಿರುವ ಈ ಕಾರ್ಡ್ ನೋಡಲು ಆಕರ್ಷಕವಾಗಿದೆ. ಇದರಲ್ಲಿ ಮೊದಲು ವರುಣ್ ಅವರ ಅಜ್ಜ-ಅಜ್ಜಿಯ ಹೆಸರನ್ನು ಮುದ್ರಿಸಲಾಗಿದೆ. ಬಳಿಕ ಚಿರಂಜೀವಿ, ಪವನ್ ಕಲ್ಯಾಣ್ ಮತ್ತು ರಾಮ್ಚರಣ್ ಹೆಸರನ್ನು ಬರೆಯಲಾಗಿದೆ. ವರುಣ್ ಪೋಷಕರಾದ ನಾಗಬಾಬು ಹಾಗೂ ಪದ್ಮಜಾ ಮತ್ತು ಲಾವಣ್ಯ ಪೋಷಕರಾದ ಕಿರಣ್ ಹಾಗೂ ದಿಯಾರಾಜ ತ್ರಿಪಾಠಿ ಹೆಸರು ಕೂಡ ಮದುವೆ ಕಾರ್ಡ್ನಲ್ಲಿದೆ.