ಹೈದರಾಬಾದ್: ಮೆಗಾ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಟಾಲಿವುಡ್ ನಟ ರಾಮ್ ಚರಣ್ ತೇಜ್ ಕುಟುಂಬದೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಪ್ರಯಾಣಕ್ಕೂ ಮುನ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟ ತಮ್ಮ ಪತ್ನಿ ಉಪಾಸನಾ, ಮಗಳು ಕ್ಲೀಂಕಾರ ಮತ್ತು ತಮ್ಮ ಮುದ್ದಿನ ಶ್ವಾನ ರೈಮ್ನೊಂದಿಗೆ ಕಾಣಿಸಿಕೊಂಡಿದ್ದಾರೆ.
ನಟ ರಾಮ್ ಚರಣ್ ಶ್ವಾನ ರೈಮ್ ಅನ್ನು ತೋಳಲ್ಲಿ ಹೊತ್ತು ಸಾಗುತ್ತಿದ್ದರೆ, ಮತ್ತೊಂದೆಡೆ ಪತ್ನಿ ಉಪಾಸನ ಮಗಳು ಕ್ಲೀಂಕಾರಳೊಂದಿಗೆ ಏರ್ಪೋರ್ಟ್ ಒಳಗಡೆ ಸಾಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕ್ಲೀಂಕಾರ ಜನನದ ನಂತರ ಪತ್ನಿ ಮತ್ತು ಮಗಳೊಂದಿಗಿನ ನಟ ರಾಮ್ ಚರಣ್ ಅವರ ಮೊದಲ ವಿದೇಶ ಪ್ರವಾಸ ಇದಾಗಿದೆ. ಮೂಲಗಳ ಪ್ರಕಾರ ವರುಣ್ ತೇಜ ಅವರ ಮದುವೆಗಾಗಿ ಇಟಲಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ತೆಲುಗು ಚಿತ್ರರಂಗದಲ್ಲಿ ಹಿಟ್ ಚಿತ್ರಗಳ ಮೂಲಕ ದೊಡ್ಡ ಮಾರುಕಟ್ಟೆಯನ್ನು ಸ್ಥಾಪಿಸಿಕೊಂಡಿರುವ ನಟ ರಾಮ್ ಚರಣ್ ಸದ್ಯ ದಕ್ಷಿಣ ಭಾರತದ ಸ್ಟಾರ್ ಡೈರೆಕ್ಟರ್ ಎಸ್ ಶಂಕರ್ ಜೊತೆ 'ಗೇಮ್ ಚೇಂಜರ್' ಎಂಬ ಸಿನಿಮಾ ಮಾಡುತ್ತಿದ್ದಾರೆ. ಅನಿರೀಕ್ಷಿತ ಅಡಚಣೆಗಳಿಂದಾಗಿ ಹಲವು ಬಾರಿ ಇದರ ಚಿತ್ರೀಕರಣ ಮುಂದೂಡಲ್ಪಟ್ಟಿತ್ತು. ಪ್ರಸ್ತುತ ಶೇ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಉಳಿದ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸಲು ಚಿತ್ರತಂಡ ಕಸರತ್ತು ನಡೆಸಿದೆ. ಇದರ ನಡುವೆಯೆ ಟಾಲಿವುಡ್ ಅಂಗಳದಲ್ಲಿ ಈ ಚಿತ್ರದ ಕುರಿತಾದ ಮತ್ತೊಂದ ಸುದ್ದಿ ಹರಿದಾಡುತ್ತಿದೆ.