ಹೈದರಾಬಾದ್: ಜೈಲರ್ ಹಿಟ್ನಲ್ಲಿ ತೇಲಾಡುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇತ್ತೀಚೆಗೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಭೇಟಿ ಮಾಡಿದ್ದರು. ರಜಿನಿಕಾಂತ್ ಅವರ ಭೇಟಿಯ ಬಗ್ಗೆ ಮಲೇಷ್ಯಾ ಪ್ರಧಾನಿ ತಮ್ಮ ಎಕ್ಸ್ ಆ್ಯಪ್ ಖಾತೆಯಲ್ಲಿ ಪೋಸ್ಟ್ ಮಾಡಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಭೇಟಿಯ ವೇಳೆಯ ಫೋಟೋಗಳನ್ನು ಹಂಚಿಕೊಂಡ ಅವರು, "ಇಂದು ನಾನು ಏಷ್ಯನ್ ಮತ್ತು ಅಂತಾರಾಷ್ಟ್ರೀಯ ಕಲಾ ಪ್ರಪಂಚದಲ್ಲಿ ಚಿರಪರಿಚಿತರಾಗಿರುವ ಭಾರತೀಯ ಚಲನಚಿತ್ರ ತಾರೆ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದೇನೆ. ನನ್ನ ಹೋರಾಟಕ್ಕೆ, ವಿಶೇಷವಾಗಿ ಜನರ ದುಃಖ ಮತ್ತು ಸಂಕಟದ ವಿಷಯದಲ್ಲಿ ಸಿನಿಮಾದ ಮೂಲಕ ಬೆಳಕು ಚೆಲ್ಲುತ್ತಿರುವುದನ್ನು ನಾನು ಪ್ರಶಂಸಿಸುತ್ತೇನೆ. ಅವರ ಮುಂದಿನ ಚಿತ್ರದಲ್ಲೂ ಸಾಮಾಜಿಕ ಸಮಸ್ಯೆಗಳ ಕುರಿತಾದ ವಿಚಾರಗಳನ್ನು ನಿಸ್ಸಂದೇಹವಾಗಿ ಪ್ರಸ್ತುತವಾಗುತ್ತದೆ. ರಜನಿಕಾಂತ್ ಅವರ ಯಶಸ್ಸು ಹೀಗೆ ಮುಂದುವರೆಯಲಿ ಎಂದು ನಾವು ಹಾರೈಸುತ್ತೇವೆ. ರಜನಿಕಾಂತ್ ಅವರು ಚಲನಚಿತ್ರ ಜಗತ್ತಿನಲ್ಲಿ ಯಶಸ್ಸನ್ನು ಮುಂದುವರೆಸಬೇಕು ಎಂದು ಹಾರೈಸುತ್ತೇವೆ" ಎಂದು ತಮ್ಮ ಪೋಸ್ಟ್‌ಗೆ ಕ್ಯಾಪ್ಶನ್ ಬರೆದಿದ್ದಾರೆ.
ರಜನಿಕಾಂತ್ ಅವರು ಬಿಳಿ ಶರ್ಟ್ ಮತ್ತು ಧೋತಿಯಲ್ಲಿ ಭೇಟಿ ಮಾಡಿದ್ದಾರೆ. ಆದರೆ ಪ್ರಧಾನಿ ಅನ್ವರ್ ಇಬ್ರಾಹಿಂ ಅಧಿಕೃತವಾಗಿ ಸೂಟ್‌ನಲ್ಲಿ ಧರಿಸಿದ್ದರು. ಮಲೇಷ್ಯಾ ಪ್ರಧಾನಿ ರಜನೀಕಾಂತ್ ಅವರು ಹತ್ತಿರಕ್ಕೆ ಬಂದಾಗ ಅವರ ಶಿವಾಜಿ ಸಿನಿಮಾದಲ್ಲಿ ಮಾಡುವ ಆ್ಯಕ್ಷನ್ ಮಾಡಿ ನಗಿಸಿದ್ದಾರೆ. ರಜನಿಕಾಂತ್ ಶೇಕ್ ಹ್ಯಾಡ್ ಮಾಡಲು ಮುಂದಾದಾಗ ಪ್ರಧಾನಿ ಅವರಂತೆ ನಟಿಸಿದರು.