ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸದ್ಯ 'ತೇಜಸ್' ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ಚಿತ್ರವು ಅಕ್ಟೋಬರ್ 27ರಂದು ಬಿಡುಗಡೆಯಾಯಿತು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿರುವ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಕಂಡಿಲ್ಲ. ಇಂದು ಲಕ್ನೋದಲ್ಲಿ ಕಂಗನಾ ರಣಾವತ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಾಗಿ 'ತೇಜಸ್' ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು.
ಲಕ್ನೋದ ಲೋಕಭವನ ಸಭಾಂಗಣದಲ್ಲಿ ತೇಜಸ್ ಸ್ಕ್ರೀನಿಂಗ್ ನಡೆಸಲಾಯಿತು. ಪ್ರದರ್ಶನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಭಾಗವಹಿಸಿದ್ದರು. ಫೋಟೋಗಳನ್ನು ಕಂಗನಾ ರಣಾವತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಇಂದು ಗೌರವಾನ್ವಿತ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಹಾಗೂ ಪುಷ್ಕರ್ ಸಿಂಗ್ ಧಾಮಿ ಅವರು ದೇಶಭಕ್ತಿ ಸಾರುವ ತೇಜಸ್ ಸಿನಿಮಾವನ್ನು ವೀಕ್ಷಿಸಿದರು. ಚಿತ್ರ ಕೊನೆಗೊಳ್ಳುತ್ತಿದ್ದಂತೆ ಸಿಎಂ ಯೋಗಿ ಆದಿತ್ಯನಾಥ್ ಭಾವುಕರಾದರು" ಎಂದು ಕ್ಯಾಪ್ಶನ್ ಬರೆದಿದ್ದಾರೆ.
'ತೇಜಸ್' ಸ್ಕ್ರೀನಿಂಗ್ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕಂಗನಾ, "ಸಿಎಂ ಯೋಗಿ ಆದಿತ್ಯನಾಥ್ ಸಿನಿಮಾ ನೋಡಿ ಭಾವುಕರಾದರು. ಚಿತ್ರವು ಮಹಿಳಾ ಸಬಲೀಕರಣ ಬಗ್ಗೆ ಮಾತ್ರವಲ್ಲದೇ ಮಹಿಳಾ ಶಕ್ತಿಯ ಬಗ್ಗೆ ಎತ್ತಿ ತೋರಿಸುತ್ತದೆ" ಎಂದು ಹೇಳಿದರು.
ಸಿನಿಮಾ ಬಿಡುಗಡೆಗೂ ಮುನ್ನ ದೆಹಲಿಯ ಇಂಡಿಯನ್ ಏರ್ಫೋರ್ಸ್ ಅಡಿಟೋರಿಯಂನಲ್ಲಿ ಆಕ್ಷನ್ ಥ್ರಿಲ್ಲರ್ 'ತೇಜಸ್' ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು. ಇದರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಹಲವು ಭಾರತೀಯ ವಾಯುಪಡೆಯ ಅಧಿಕಾರಿಗಳು ಭಾಗವಹಿಸಿದ್ದರು.