ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಪ್ರಪಂಚದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. 2023ರಲ್ಲಿ 'ಪಠಾಣ್' ಮತ್ತು 'ಜವಾನ್' ಎಂಬ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ತಮ್ಮ 'ಕಿಂಗ್ ಖಾನ್' ಹೆಸರನ್ನು ಭದ್ರಪಡಿಸಿಕೊಂಡಿದ್ದಾರೆ. ಈ ಸಿನಿಮಾಗಳು ವಿಶ್ವದಾದ್ಯಂತ 1,000 ಕೋಟಿ ರೂಪಾಯಿ ಗಳಿಸುವಲ್ಲಿ ಯಶ ಕಂಡಿದೆ. ಡಿಸೆಂಬರ್ನಲ್ಲಿ ತೆರೆ ಕಾಣಲಿರುವ 'ಡಂಕಿ' ಚಿತ್ರದ ಮೇಲೂ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಅದರಲ್ಲೂ 'ಪಠಾಣ್'ಗಿಂತ 'ಜವಾನ್' ಒಂದು ಹೆಜ್ಜೆ ಮುಂದಿದೆ. ಗಲ್ಲಾಪೆಟ್ಟಿಗೆಯ ಸಿಂಹಾಸನವೇರಿ ರಾಜನಾಗಿ ಮೆರೆಯುತ್ತಿದೆ. ಸೆಪ್ಟೆಂಬರ್ 7 ರಂದು ಬಿಡುಗಡೆಯಾದ ಚಿತ್ರ ಥಿಯೇಟರ್ಗಳಲ್ಲಿ ವೈಭವೋಪೇತವಾಗಿ ಓಡುತ್ತಿದೆ. ಕಲೆಕ್ಷನ್ಗೆ ಯಾವುದೇ ತಡೆಯಾಗದಂತೆ ಅದ್ಭುತವಾಗಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಈ ಕಾರಣಕ್ಕೆ ಶಾರುಖ್ ಖಾನ್ ಅಭಿಮಾನಿಗಳು ಕೂಡ ಫುಲ್ ಖುಷಿಯಾಗಿದ್ದಾರೆ. ನಟನ ಮೇಲೆ ಅಪಾರವಾದ ಪ್ರೀತಿಯ ಹೊಳೆಯನ್ನೇ ಹರಿಸುತ್ತಿದ್ದಾರೆ.
ಅದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಅಭಿಮಾನಿಯೊಬ್ಬರು ಶಾರುಖ್ ಖಾನ್ ಅವರ ಟ್ಯಾಟೂವನ್ನು ಬೆನ್ನಿನ ಮೇಲೆ ಹಾಕಿಸಿಕೊಂಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋವನ್ನು ನಟ ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ "ಥ್ಯಾಂಕ್ ಯು!! ಇದು ನಿಮ್ಮನ್ನು ಹೆಚ್ಚು ನೋಯಿಸಲಿಲ್ಲ ಎಂದು ಭಾವಿಸುತ್ತೇನೆ! ಹಾ ಹಾ" ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಅಭಿಮಾನಿಯೊಬ್ಬರ ಮೇಲೆ ಟ್ಯಾಟೂ ರೂಪದಲ್ಲಿ ಮೂಡಿಬಂದ ಶಾರುಖ್ ಖಾನ್ ಅವರನ್ನು ಕಾಣಬಹುದು.