ಕನ್ನಡ ಚಿತ್ರರಂಗದಲ್ಲಿ ಅಧ್ಯಕ್ಷ, ರನ್ನ, ಪೊಗರು ಎಂಬಂತಹ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಹೆಸರಾಂತ ನಿರ್ದೇಶಕ ನಂದ ಕಿಶೋರ್. ಇವರು ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಅಭಿನಯದ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗುವ ಮೂಲಕ ಮಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಬಹುನಿರೀಕ್ಷಿತ 'ವೃಷಭ' ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಒಂದು ತಿಂಗಳ ಕಾಲ ಮೈಸೂರಿನಲ್ಲಿ ಶೂಟಿಂಗ್ ನಡೆದಿದೆ. ಭಾರತೀಯ ಚಿತ್ರರಂಗದಲ್ಲಿ ಈವರೆಗೂ ಕಂಡುಕೇಳರಿಯದ ಬೃಹತ್ ಆ್ಯಕ್ಷನ್ ದೃಶ್ಯಗಳನ್ನು ಈ ಹಂತದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಮೈಸೂರಿನಲ್ಲಿ ಶೂಟಿಂಗ್: ನಂದ ಕಿಶೋರ್ ನಿರ್ದೇಶನದ 'ವೃಷಭ' ಚಿತ್ರದ ಚಿತ್ರೀಕರಣ ಕಳೆದ ತಿಂಗಳ 22 ರಂದು ಮೈಸೂರಿನಲ್ಲಿ ಪ್ರಾರಂಭವಾಗಿತ್ತು. ಶೂಟಿಂಗ್ನಲ್ಲಿ ಮೋಹನ್ ಲಾಲ್, ರೋಶನ್ ಮೇಕಾ, ಶನಾಯ ಕಪೂರ್, ಶ್ರೀಕಾಂತ್ ಮೇಕಾ, ರಾಗಿಣಿ ದ್ವಿವೇದಿ ಮುಂತಾದವರು ಪಾಲ್ಗೊಂಡಿದ್ದರು. ಚಿತ್ರ ನಿರ್ಮಾಪಕರು, ಯಾವುದೇ ಕುಂದುಕೊರತೆಗಳು ಎದುರಾಗದಂತೆ ಎಲ್ಲಾ ದೃಶ್ಯಗಳು ಅದ್ಭುತವಾಗಿ ಮತ್ತು ನೈಜವಾಗಿ ಮೂಡಿಬರುವಂತೆ ಶ್ರಮ ವಹಿಸಿದ್ದರು.
'ವೃಷಭ' ವಿಶೇಷತೆ: ಹಾಲಿವುಡ್ನ ಜನಪ್ರಿಯ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಗುರುತಿಸಿಕೊಂಡಿರುವ ನಿಕ್ ಥರ್ಲೋ ಈ ಚಿತ್ರಕ್ಕೆ ಕೆಲಸ ಮಾಡುತ್ತಿರುವುದು ವಿಶೇಷ. ಇದಲ್ಲದೇ ಬಾಹುಬಲಿ, ಪುಲಿಮುರುಗನ್, ಶಿವಾಜಿ- ದಿ ಬಾಸ್, ಎಂದಿರನ್, ಪುಷ್ಪ: ದಿ ರೈಸ್ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಭಾರತೀಯ ಚಿತ್ರರಂಗದ ಜನಪ್ರಿಯ ಸಾಹಸ ನಿರ್ದೇಶಕರಾದ ಪೀಟರ್ ಹೆನ್ಸ್ 'ವೃಷಭ' ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸುತ್ತಿರುವುದು ಮತ್ತೊಂದು ಹೆಗ್ಗಳಿಕೆ.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ನಂದ ಕಿಶೋರ್, "ಮೊದಲ ಹಂತದ ಚಿತ್ರೀಕರಣದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದ್ದನ್ನು ಸಾಧಿಸಿದ ಖುಷಿ ನಮಗಿದೆ. ಇದಕ್ಕಾಗಿ ಹಗಲು ರಾತ್ರಿ ಕಷ್ಟಪಟ್ಟು ದುಡಿದ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದಗಳನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ. ಮೋಹನ್ ಲಾಲ್ ಸರ್, ರೋಶನ್, ಶ್ರೀಕಾಂತ್, ರಾಗಿಣಿ ಮುಂತಾದವರು ನಮ್ಮ ಡೆಡ್ ಲೈನ್ಗಳನ್ನು ಪೂರೈಸುವಲ್ಲಿ ಪೂರಕವಾಗಿ ಕೆಲಸ ಮಾಡಿದ್ದಾರೆ. ಪುಲಿಮುರುಗನ್ ಚಿತ್ರದ ನಂತರ ಮೋಹನ್ ಲಾಲ್ ಮತ್ತು ಪೀಟರ್ ಹೆನ್ಸ್ ಈ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದು, ವೃಷಭವು ಭಾರತದ ಅತೀ ದೊಡ್ಡ ಆ್ಯಕ್ಷನ್ ಚಿತ್ರವಾಗಿ ಮೂಡಿಬರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರತಂಡ ಹೀಗಿದೆ..:'ವೃಷಭ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಅತಿ ದೊಡ್ಡ ಆ್ಯಕ್ಷನ್ ಚಿತ್ರ. ಮೋಹನ್ ಲಾಲ್, ರೋಶನ್ ಮೇಕಾ, ಶನಾಯ ಕಪೂರ್, ಝಹ್ರ ಎಸ್. ಖಾನ್, ಶ್ರೀಕಾಂತ್ ಮೇಕಾ, ರಾಗಿಣಿ ದ್ವಿವೇದಿ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ವಿಎಫ್ಎಕ್ಸ್ ದೊಡ್ಡ ಪ್ರಮಾಣದಲ್ಲಿದ್ದು, ಇದೊಂದು ಕೇವಲ ಆ್ಯಕ್ಷನ್ ಚಿತ್ರ ಅಷ್ಟೇ ಅಲ್ಲ, ಅದ್ಭುತ ಸೆಂಟಿಮೆಂಟ್ ಒಳಗೊಂಡ ಕಥೆಯಾಗಿ ಮೂಡಿಬರಲಿದೆ ಎಂದು ಚಿತ್ರತಂಡ ಹೇಳಿದೆ.
'ವೃಷಭ' ಚಿತ್ರವನ್ನು ಕನೆಕ್ಟ್ ಮೀಡಿಯಾ ಮತ್ತು ಬಾಲಾಜಿ ಟೆಲಿಫಿಲಂಸ್, ಎವಿಎಸ್ ಸ್ಟುಡಿಯೋಸ್ ಜೊತೆಯಾಗಿ ಅರ್ಪಿಸುತ್ತಿದೆ. ನಂದ ಕಿಶೋರ್ ನಿರ್ದೇಶನದ ಸಿನಿಮಾವನ್ನು ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಅಭಿಷೇಕ್ ವ್ಯಾಸ್ (ಏವಿಎಸ್), ಶ್ಯಾಮ್ ಸುಂದರ್ (ಫಸ್ಟ್ ಸ್ಟೆಪ್ ಮೂವೀಸ್), ಏಕ್ತಾ ಕಪೂರ್, ಶೋಭಾ ಕಪೂರ್ (ಬಾಲಾಜಿ ಟೆಲಿಫಿಲಂಸ್), ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ (ಕನೆಕ್ಟ್ ಮೀಡಿಯಾ) ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ತೆಲುಗು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರವು ತೆಲುಗು, ಮಲಯಾಳಂ, ಹಿಂದಿ, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ:ಸೆಟ್ಟೇರಿತು ನಂದ ಕಿಶೋರ್ - ಮೋಹನ್ಲಾಲ್ 'ವೃಷಭ' ಸಿನಿಮಾ.. 2024ರ ಬಿಗ್ ಬಜೆಟ್ ಚಿತ್ರವಿದು..