ಸಿನಿಮಾ ಮತ್ತು ಹೇಳಿಕೆಗಳಿಂದ ಸುದ್ದಿಯಲ್ಲಿರುವ ಬಾಲಿವುಡ್ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇದೀಗ ಮತ್ತೊಂದು ಹೇಳಿಕೆ ಮೂಲಕ ಚರ್ಚೆಯಲ್ಲಿದ್ದಾರೆ. ಮುಂಬರುವ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಲು ನಿರಾಕರಿಸಿದ್ದಾರೆ. ಅಲ್ಲದೇ ಈ ಪ್ರಶಸ್ತಿ ಸಮಾರಂಭದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪರ ವಿರೋಧದ ಚರ್ಚೆಗೆ ವೇದಿಕೆ ಸೃಷ್ಟಿಸಿದ್ದಾರೆ.
ಫಿಲ್ಮ್‌ಫೇರ್ ಪ್ರಶಸ್ತಿಯಲ್ಲಿ ಅವರ ಚಲನಚಿತ್ರ 'ದಿ ಕಾಶ್ಮೀರ್ ಫೈಲ್ಸ್' ಅತ್ಯುತ್ತಮ ನಿರ್ದೇಶಕ ಸೇರಿದಂತೆ ಏಳು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ. ಅದಾಗ್ಯೂ, 'ದಬ್ಬಾಳಿಕೆ ಮತ್ತು ಭ್ರಷ್ಟ ವ್ಯವಸ್ಥೆಯ ಭಾಗವಾಗಲು ಬಯಸುವುದಿಲ್ಲ. ಬರಹಗಾರರು, ನಿರ್ದೇಶಕರು ಮತ್ತು ಚಿತ್ರದ ಸಿಬ್ಬಂದಿಯನ್ನು ಸ್ಟಾರ್‌ಗಳಿಗಿಂತ ಕೀಳಾಗಿ ಪರಿಗಣಿಸುವ ಪ್ರಶಸ್ತಿಗಳಿವು ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಟ್ವೀಟ್: ಈ ವರ್ಷದ ಫಿಲ್ಮ್‌ಫೇರ್ ನಾಮನಿರ್ದೇಶನಗಳ ಕುರಿತು ಮಾಡಿದ ಟ್ವೀಟ್ ಒಂದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇಂದು ಧೀರ್ಘ ಟ್ವೀಟ್ವೊಂದನ್ನು ಮಾಡಿದ್ದಾರೆ. '68ನೇ ಫಿಲ್ಮ್‌ಫೇರ್ ಪ್ರಶಸ್ತಿಯ 7 ವಿಭಾಗಗಳಲ್ಲಿ 'ದಿ ಕಾಶ್ಮೀರ್ ಫೈಲ್ಸ್' ನಾಮ ನಿರ್ದೇಶನಗೊಂಡಿದೆ ಎಂದು ನಾನು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ. ಆದರೆ, ಈ ಅನೈತಿಕ ಮತ್ತು ಸಿನಿಮಾ ವಿರೋಧಿ ಪ್ರಶಸ್ತಿಗಳ ಭಾಗವಾಗುವುದನ್ನು ನಾನು ನಯವಾಗಿ ನಿರಾಕರಿಸುತ್ತೇನೆ. ಏಕೆಂದರೆ, ಫಿಲ್ಮ್‌ಫೇರ್ ಪ್ರಕಾರ, ಸ್ಟಾರ್ಗಳ (ಪ್ರಮುಖ ನಟರು) ಹೊರತಾಗಿ ಯಾರೂ ಪ್ರಮುಖರಲ್ಲ. 'ಪರಿಣಾಮವಾಗಿ, ಸಂಜಯ್ ಲೀಲಾ ಬನ್ಸಾಲಿ ಮತ್ತು ಸೂರಜ್ ಬರ್ಜತ್ಯಾ ಅವರಂತಹ ಮಾಸ್ಟರ್ ಡೈರೆಕ್ಟರ್‌ಗಳಿಗೆ ಫಿಲ್ಮ್‌ಫೇರ್ ಎಂಬ ಅನೈತಿಕ ಜಗತ್ತಿನಲ್ಲಿ ಪ್ರಾಮುಖ್ಯತೆ ಸಿಕ್ಕಿಲ್ಲ. ಸಂಜಯ್ ಲೀಲಾ ಬನ್ಸಾಲಿ ಅವರನ್ನು ಆಲಿಯಾ ಭಟ್ ಅವರ ಸಮಾನರಾಗಿ ಕಾಣಲಾಗುತ್ತಿದೆ. ಇದು ಅತ್ಯಂತ ಖೇದಕರ, ಸೂರಜ್ ಅವರನ್ನು ಬಚ್ಚನ್ ಮತ್ತು ಅನ್ನಿಸ್ ಬಾಜ್ಮಿ ಅವರನ್ನು ಕಾರ್ತಿಕ್ ಆರ್ಯನ್ ಅವರಿಗೆ ಸಮೀಕರಿಸಲಾಗಿದೆ. ಫಿಲ್ಮ್‌ಫೇರ್ ಪ್ರಶಸ್ತಿಗಳು ಚಲನಚಿತ್ರ ನಿರ್ಮಾಪಕರಿಗೆ ಘನತೆಯನ್ನು ನೀಡುವುದಿಲ್ಲ. ಈ ಅವಮಾನಕರ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಟ್ವೀಟ್ನಲ್ಲಿ ಅಗ್ನಿಹೋತ್ರಿ ಅವರು ಆಗ್ರಹಿಸಿದ್ದಾರೆ.