ಮೇರಿಲ್ಯಾಂಡ್(ಅಮೆರಿಕ) :ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ಕಾಶ್ಮೀರಿ ಪೈಲ್ಸ್ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಇದೀಗ, ಮಾರಕ ಕೊರೊನಾ ಸೋಂಕಿಗೆ ಮದ್ದು ಅರೆದ ಭಾರತದ ವಿಜ್ಞಾನಿಗಳ ಸಾಧನೆಯನ್ನು ಅನಾವರಣ ಮಾಡುವ 'ದಿ ವ್ಯಾಕ್ಸಿನ್ ವಾರ್' ಚಲನಚಿತ್ರ ತಯಾರಿಸಿದ್ದಾರೆ. ಇದರ ಮೊದಲ ವಿಶೇಷ ಪ್ರದರ್ಶನ ಅಮೆರಿಕದಲ್ಲಿ ಸೋಮವಾರ ನಡೆಸಲಾಗಿದೆ.
ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಸಿನಿಮಾ ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದು, ಅದಕ್ಕೂ ಮೊದಲು ಅಮೆರಿಕದಲ್ಲಿ 'ಇಂಡಿಯಾ ಫಾರ್ ಹ್ಯುಮಾನಿಟಿ ಟೂರ್' ಟ್ಯಾಗ್ಲೈನ್ ಅಡಿ ಚಿತ್ರದ ವಿಶೇಷ ಪ್ರದರ್ಶನ ನಡೆಸಲಾಗಿದೆ.
ವಿಜ್ಞಾನಿಗಳು, ವೈದ್ಯರಿಗೆ ಸಿನಿಮಾ ಅರ್ಪಣೆ:ಇದೇ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು, ತಮ್ಮ ಮುಂಬರುವ ಚಿತ್ರ 'ದಿ ವ್ಯಾಕ್ಸಿನ್ ವಾರ್' ಅನ್ನು ಕೊರೊನಾಗೆ ಯಶಸ್ವಿಯಾಗಿ ಲಸಿಕೆಯನ್ನು ಕಂಡುಹಿಡಿದ ಭಾರತೀಯ ವಿಜ್ಞಾನಿಗಳು ಮತ್ತು ವೈದ್ಯರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.
ಭಾರತದ ಈ ಮಹಾನ್ ವೈಜ್ಞಾನಿಕ ಸಾಧನೆಯನ್ನು ವಿಶ್ವ ವೇದಿಕೆಯಲ್ಲಿ ಪ್ರದರ್ಶಿಸಲು ನಾನು ಬಯಸುವೆ. ಕೊರೊನಾ ಲಸಿಕೆ ಕಂಡು ಹಿಡಿಯುವ ವೇಳೆ ಭಾರತ ಮತ್ತು ಅಮೆರಿಕ ದೇಶಗಳ ಸಹಯೋಗ, ಸಹಕಾರ ಮತ್ತು ಪರಸ್ಪರ ತಿಳಿವಳಿಕೆ ಇತ್ತು. ಕೋವಿಡ್ ಅತ್ಯಧಿಕವಾಗಿದ್ದ ವೇಳೆ ಅಮೆರಿಕದಲ್ಲಿ ಹೆಚ್ಚಿನ ಸಾವುನೋವುಗಳು ದಾಖಲಾದವು. ಜಗತ್ತೇ ಇತ್ತ ಕಡೆ ಗಮನಿಸುತ್ತಿತ್ತು. ಹೀಗಾಗಿ ಸಿನಿಮಾವನ್ನು ಇಲ್ಲಿಂದಲೇ ಆರಂಭಿಸುವುದು ಒಳ್ಳೆಯದು ಎಂದು ಭಾವಿಸಿದ್ದಾಗಿ ಹೇಳಿದರು.